ಗದಗ: ಈರುಳ್ಳಿ ಬೆಳೆ ರೈತರಲ್ಲಿ ಕಣ್ಣೀರು ತರಿಸಿದೆ. ದೊಡ್ಡ ನಗರಕ್ಕೆ ತೆಗೆದುಕೊಂಡು ಹೋದ್ರೆ ಲಾಭ ಆಗಬಹುದು ಎಂದು ರಾಜಧಾನಿಗೆ ತಂದಿದ್ರು. ಆದರೆ, ರೈತರಿಗೆ ಅಲ್ಲಿ ಆಗಿದ್ದೆ ಬೇರೆ. ಲಾಭದ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಶಾಕ್ ಆಗಿದೆ. ಅರೇ, ಅದ್ಯಾಕೆ? ಏನು ಆ ಶಾಕ್ ಅಂತೀರಾ? ಗದಗನಿಂದ ಬಂದ ಈರುಳ್ಳಿ ಕಣ್ಣೀರು ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ಜಿಲ್ಲೆಯಲ್ಲೇ ಅತೀ ಹೆಚ್ಚು ಈರುಳ್ಳಿ ಬೆಳೆ ಬೆಳೆಯಲಾಗುತ್ತೆ. ಸ್ಥಳಿಯ ಮಾರುಕಟ್ಟೆನಲ್ಲಿ ರೇಟ್ ಸಿಗೊಲ್ಲ ಅಂತ ಅನೇಕ ರೈತರು ತಮ್ಮ ಈರುಳ್ಳಿಯನ್ನು ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗ್ತಾರೆ. ಅಲ್ಲಿಯಾದರೂ ನಮಗೆ ಬಂಪರ್ ರೇಟ್ ಸಿಗುತ್ತೆ ಅನ್ನೋ ಕನಸು ಹೊತ್ತಿದ್ರು. ಆದ್ರೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ರೈತರಿಗೆ ಆಗಿದ್ದೇ ಬೇರೆ.
ಕ್ವಿಂಟಲ್ಗೆ 50 ರೂ. 100 ರೂ., 200 ರೂ. ರೇಟ್ ಸಿಕ್ಕಿದೆ. ಪವಾಡೆಪ್ಪ ಹಳ್ಳಿಕೇರಿ ಎಂಬ ರೈತ ಸುಮಾರು 205 ಕೆಜಿ ಈರುಳ್ಳಿ ಮಾರಿದ್ದ. ಅದರ ಖರ್ಚು ವೆಚ್ಚ ತೆಗೆದು ಉಳಿದಿದ್ದು ಕೇವಲ 8 ರೂಪಾಯಿ 36 ಪೈಸೆ ಮಾತ್ರ! ಒಳ್ಳೆ ರೇಟ್ ಸಿಗುತ್ತೆ ಅಂತ ಗದಗನಿಂದ ಬೆಂಗಳೂರುವರೆಗೆ ಹೋದ್ರು ಸಿಕ್ಕಿದ್ದು ಬಿಡಿಕಾಸು ಮಾತ್ರ. ಅನ್ಯ ರಾಜ್ಯದ ಈರುಳ್ಳಿ ಮುಂದೆ ನಾವು ಬೆಳೆದ ಈರುಳ್ಳಿಗೆ ದರ ಸಿಗುತ್ತಿಲ್ಲ ಅಂತ ರೈತ ಅಳಲು ತೋಡಿಕೊಂಡಿದ್ದಾನೆ.
ಇನ್ನು ಬೆಂಗಳೂರು, ಯಶವಂತಪುರ ಮಾರುಕಟ್ಟೆಯಲ್ಲಿ 212 ಕೆಜಿ ಈರುಳ್ಳಿ ಮಾರಿದ ಮತ್ತೋರ್ವ ರೈತನಿಗೆ ಕೇವಲ ಸಾವಿರ ರೂಪಾಯಿ ಸಿಕ್ಕಿದೆ. ಆದರೆ ಪೋರ್ಟರ್ ಶುಲ್ಕ, ಟ್ರಾನ್ಸ್ಪೋರ್ಟ್ ಚಾರ್ಜ್, ಹಮಾಲಿ, ದಲಾಲಿ, ರೈತರ ಖರ್ಚು ಸೇರಿದಂತೆ ಇತರೆ ವೆಚ್ಚ ತೆಗೆದರೆ ಅವಿರಿಗೂ ಸಿಗೋದು 10 ರಿಂದ 4 ರೂಪಾಯಿ ಮಾತ್ರ! ಹೀಗೆ ಜಿಲ್ಲೆಯ ಅನೇಕ ರೈತರು ಈರುಳ್ಳಿ ಬೆಳೆದು ಕಣ್ಣೀರು ಸುರಿಸುವಂತಾಗಿದೆ.
ಈ ವರ್ಷದ ಅತಿವೃಷ್ಠಿಯಿಂದ ಜಿಲ್ಲೆ ರೈತರು ಕಂಗಾಲಾಗಿದ್ದಾರೆ. ಗದಗ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ ಅಂತ ಬೆಂಗಳೂರು ಮಾರುಕಟ್ಟೆಗೆ ಹೋದರೂ ಸಂಕಷ್ಟ ತಪ್ಪುತ್ತಿಲ್ಲ. ಖರ್ಚು ಮಾಡಿದ ಅಸಲೂ ಸಹ ತಿರುಗಿ ಬಂದಿಲ್ಲ. ಕೃಷಿ ಸಚಿವರು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ನಮ್ಮತ್ತ ತಿರುಗಿ ನೋಡಿ. ಸೂಕ್ತ ಬೆಂಬಲ ಬೆಲೆ ಕಲ್ಪಸಿಕೊಡಿ ಅಂತಿದ್ದಾರೆ ಈರುಳ್ಳಿ ಬೆಳೆದ ರೈತರು.
ಒಟ್ಟಾರೆ ಗದಗ ಜಿಲ್ಲೆಯ ರೈತರಿಗೆ ಈ ವರ್ಷದ ಈರುಳ್ಳಿ ಕಣ್ಣೀರು ತರಿಸುತ್ತಿರುವುದು ಸುಳ್ಳಲ್ಲ. ಸತತವಾಗಿ ಸುರಿದ ಮಳೆಯಿಂದಾಗಿ ರೈತ ವರ್ಗ ಸಾಕಷ್ಟು ನಷ್ಟ ಅನುಭವಿಸಿದೆ. ಈ ವೇಳೆ, ಸರ್ಕಾರ ಬೆಂಬಲ ಬೆಲೆ ಘೋಷಿಸುವ ಮೂಲಕ ನೊಂದ ರೈತರ ಕಣ್ಣೀರು ಒರೆಸಲಿ ಎಂಬುದು ಎಲ್ಲರ ಆಶಯವಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸಭೆಗೇ ನುಗ್ಗಿದ ಗೂಳಿ.. ಬಿಜೆಪಿಯವರೇ ಕಳಿಸಿದ್ದಾರೆ ಎಂದ ರಾಜಸ್ಥಾನ ಮುಖ್ಯಮಂತ್ರಿ