ಗದಗ: ಎಸಿಬಿ ದಾಳಿಗೊಳಗಾಗಿ ವಿಚಾರಣೆಗೊಳಪಟ್ಟಿದ್ದ ಗದಗ - ಬೆಟಗೇರಿ ನಗರಸಭೆಯ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಅನಿಲ್ ಕುಮಾರ್ ಮುದ್ದಾ ಅವರನ್ನು ಎಸಿಬಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಘನತ್ಯಾಜ್ಯ ವಿಲೇವಾರಿ ಘಟಕದಿಂದ ಹೊಸ ಘಟಕಕ್ಕೆ ಮಣ್ಣು ಸಾಗಣೆ ಮಾಡಿದ ಬಿಲ್ ಪಾಸ್ ಮಾಡಲು ನಗರಸಭೆ ಎಇಇ ವರ್ಧಮಾನ್ ಎಸ್.ಹುದ್ದಾರ್, ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಕಾರ್ಯ ಪಾಲಕ ಇಂಜಿನಿಯರ್ ಅನಿಲ್ ಕುಮಾರ್ ಮುದ್ದಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅನಿಲ್ ಕುಮಾರ್ ಮುದ್ದಾ ಜುಲೈ 5ರಂದು 5,000 ರೂ. ಹಣ ಪಡೆದಿದ್ದರು. ನಗರಸಭೆ ಆಯುಕ್ತ ರಮೇಶ್ ಜಾಧವ್ ಕೂಡ 1.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಜೊತೆಗೆ ನಗರಸಭೆಯ ಎಇಇ ವರ್ಧಮಾನ್ ಹುದ್ದಾರ್ 40 ಸಾವಿರ ಹಣ ಕೇಳಿದ್ದರಂತೆ. ಇದರಿಂದ ನೊಂದ ಗುತ್ತಿಗೆದಾರ ಅಬ್ದುಲ್ ಸಲಾಮ್ ಮನಿಯಾರ್ ಎಸಿಬಿಗೆ ದೂರು ನೀಡಿದ್ದರು.
ಅದರಂತೆ ಬುಧವಾರ ಸಂಜೆ 25 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಎಇಇ ಹುದ್ದಾರ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಹುದ್ದಾರ್ ಅವರ ಬಂಧನದ ಅನಂತರ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅನಿಲ್ ಕುಮಾರ್ ಮುದ್ದಾ ಅವರನ್ನು ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು.
ಬುಧವಾರ ಮಧ್ಯರಾತ್ರಿ ಮನೆಗೆ ಕಳುಹಿಸಿದ್ದ ಎಸಿಬಿ ಅಧಿಕಾರಿಗಳು, ಮತ್ತೆ ಗುರುವಾರ ಮುಂಜಾನೆಯಿಂದ ಧ್ವನಿ ಪರೀಕ್ಷೆ ಸೇರಿದಂತೆ ಅನೇಕ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿ, ರಾತ್ರಿ ಅನಿಲ್ ಕುಮಾರ್ ಮುದ್ದಾ ಅವರನ್ನು ಬಂಧಿಸಿದ್ದಾರೆ. ಸದ್ಯ ಕಮೀಷನರ್ ರಮೇಶ್ ಜಾಧವ್ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪ: ACB ಖೆಡ್ಡಾಕ್ಕೆ ಬಿದ್ದ AEE ..