ಗದಗ : ಕೊರೊನಾ ಸೋಂಕಿನ ಅಬ್ಬರ ದಿನೇದಿನೆ ಹೆಚ್ಚಾಗುತ್ತಿದೆ. ಇದರ ಬಿಸಿ ಜನರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತಟ್ಟಿದೆ. ಜಿಲ್ಲೆಯ ಶಿರಹಟ್ಟಿಯ ಫಕಿರೇಶ್ವರ ಮಠ ಹಾಗೂ ಲಕ್ಷ್ಮೇಶ್ವರದ ಮುಕ್ತಿ ಮಠದ ಆನೆಗಳನ್ನು ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಐಸೊಲೇಷನ್‌ನಲ್ಲಿರಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದ್ಯರು ಪ್ರತಿ ದಿನ ಎರಡು ಆನೆಗಳಿಗೆ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ನಿತ್ಯ 4 ಕಿ.ಮೀ ವಾಕಿಂಗ್ ಹಾಗೂ ಆಹಾರಕ್ಕಾಗಿ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಲಾಕ್‌ಡೌನ್ ಆದೇಶದ ನಂತರ ಎರಡೂ ಆನೆಗಳನ್ನು ಮಠದಲ್ಲೇ ಆರೈಕೆ ಮಾಡಲಾಗುತ್ತಿದೆ. ಈಚೆಗೆ ನ್ಯೂಯಾರ್ಕ್ ಮೃಗಾಲಯದ ಹುಲಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರಾಣಿಗಳ ಮೇಲೆ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡಿದೆ ಎನ್ನಲಾಗಿದೆ.
ಪ್ರತಿದಿನ ಮಠಗಳಿಗೆ ಭೇಟಿ ನೀಡಿ ಎರಡು ಆನೆಗಳ ಆರೋಗ್ಯದ ಬಗ್ಗೆ ನಿಗಾವಹಿಸಲಾಗಿದೆ. ಮಾವುತರಿಗೆ ಮಾಸ್ಕ್ ಧರಿಸಿ ಆನೆಗಳ ಆರೈಕೆ ಮಾಡಬೇಕು ಹಾಗೂ ಹೊರಗಿನ ಯಾವುದೇ ವ್ಯಕ್ತಿಗಳನ್ನು ಭೇಟಿ ಮಾಡದಂತೆ ಸೂಚನೆ ನೀಡಿದ್ದಾರೆ. ಪ್ರತಿದಿನ ಎರಡು ಬಾರಿ ಸೋಪು ಉಪಯೋಗಿಸಿ ಸ್ನಾನ ಮಾಡಿಸಲಾಗುತ್ತಿದೆ. ಆನೆಗಳಿಗೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡರೆ ಸೂಚನೆ ನೀಡುವಂತೆ ಮಾವುತರಿಗೆ ಪಶು ವೈದ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ.