ಗದಗ: ಆಕೆಗೆ ಬಂಧು ಬಳಗ ಯಾರೂ ಇಲ್ಲ. ಮಕ್ಕಳು ಮರಿ ಅಂತ ಮೊದಲೇ ಇಲ್ಲ. ಇರಲು ಸೂರಿಲ್ಲ, ಬದುಕಲು ಭೂಮಿ ಭಾರವಾಗಿದೆ. ಹೀಗೆ ಮನೆ ಮಠ ಇಲ್ಲದೆ ಬಯಲಿನಲ್ಲಿ ಜೀವನ ಸಾಗಿಸುತ್ತಿರುವ ಹಿರಿಯ ಜೀವವೊಂದರ ಕತೆಯಿದು.
ಗದಗ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಯಲ್ಲಮ್ಮ ಪಾಟೀಲ್ (62) ಎಂಬ ವೃದ್ಧೆ ಮಳೆ, ಚಳಿಯೆನ್ನದೆ ಕೆರೆಯ ಪಕ್ಕದ ಬಯಲು ಜಾಗದಲ್ಲಿ ಮೇಲ್ಛಾವಣಿ ಇಲ್ಲದ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದಾಳೆ. ಗುಡಿಸಲಿಗೆ ಮೇಲ್ಛಾವಣಿ, ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ಹುಳು ಹುಪ್ಪಟೆಗಳ ಕಾಟ ಹೆಚ್ಚಾಗಿದೆ. ಇದರಿಂದ ವೃದ್ಧೆ ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುತ್ತಿದ್ದಾಳೆ.
ಕಳೆದ 20 ವರ್ಷಗಳಿಂದ ಒಂದು ಚಿಕ್ಕ ಮನೆಗಾಗಿ ಗ್ರಾಮ ಪಂಚಾಯಿತಿಗೆ ಅಲೆದಾಡಿ ಸುಸ್ತಾಗಿದ್ದಾಳೆ. ಮನೆ ಮಂಜೂರು ಮಾಡುವಂತೆ ಐದಾರು ಬಾರಿ ಅರ್ಜಿ ಹಾಕಿದರೂ ಪ್ರಯೋಜನವಾಗಿಲ್ಲ. ಅರ್ಜಿ ನಮೂನೆ ಕಸದ ಬುಟ್ಟಿಗೆ ಸೇರಿದೆ ವಿನಾ ಯಾರೊಬ್ಬರೂ ವೃದ್ಧೆಗೆ ಸೂರು ನೀಡುವ ಗೋಜಿಗೆ ಹೋಗಿಲ್ಲ.
ಗ್ರಾಪಂ ಸದಸ್ಯರು ಹಾಗೂ ಪಿಡಿಒ ತಮಗೆ ಬೇಕಾದವರಿಗೆ ಮಾತ್ರ ಮನೆ ನೀಡಿದ್ದಾರೆ ಎಂದು ವೃದ್ಧೆ ಆರೋಪಿಸಿದ್ದಾಳೆ. ಸದ್ಯ ಮಳೆಗಾಲ ಆರಂಭವಾಗಿದ್ದರಿಂದ ಮೇಲ್ಛಾವಣಿಯಿಲ್ಲದೆ ಪರದಾಡುವಂತಾಗಿದ್ದು, ಒಂದು ಸೂರು ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ವೃದ್ಧೆ ಕೈ ಮುಗಿದು ಮನವಿ ಮಾಡಿದ್ದಾಳೆ.