ಗದಗ: ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಲುಕಿ ಜನಜೀವನ ಸಂಕಷ್ಟಕ್ಕೀಡಾಗಿರುವುದು ಒಂದೆಡೆಯಾದರೆ, ಮೂಖ ಪ್ರಾಣಿಗಳ ಆರ್ತನಾದವೂ ಮುಂದುವರೆದಿದೆ.
ಹೌದು, ಕಳೆದೆರಡು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ವರುಣದೇವ ಆರ್ಭಟಿಸುತ್ತಿದ್ದು ಜನಜೀವನ ಅಕ್ಷರಶಃ ಬೀದಿಗೆ ಬಂದಿದೆ. ಗದಗ ಜಿಲ್ಲೆಯ ಹಲವು ಗ್ರಾಮಗಳೂ ಮುಳುಗಡೆಯಾಗಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಕೃತಿ ವಿಕೋಪಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಜನರ ದುಸ್ಥಿತಿ ಒಂದೆಡೆಯಾದ್ರೆ ಮೂಕ ಪ್ರಾಣಿಗಳ ರೋದನೆ ಮನಕಲಕುವಂತಿದೆ.
ಇದಕ್ಕೆ ನಿದರ್ಶನವೆಂಬಂತೆ ಶ್ವಾನವೊಂದು ಬೆಣ್ಣೆಹಳ್ಳ ಪ್ರವಾಹದಲ್ಲಿ ಕೊಚ್ಚಿ ಹೋದ ದೃಶ್ಯ ಸೆರೆ ಸಿಕ್ಕಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಬಳಿಯ ಬೆಣ್ಣೆಹಳ್ಳದಲ್ಲಿ ನೀರಿನ ರಭಸಕ್ಕೆ ಶ್ವಾನ ಕೊಚ್ಚಿಹೋಗಿದೆ. ಪ್ರವಾಹದಲ್ಲಿ ತೇಲಿಹೋಗುತ್ತಿದ್ದ ಶ್ವಾನವನ್ನು ಕಣ್ಣಾರೆ ಕಂಡರೂ ಏನು ಮಾಡದ ಸ್ಥಿತಿಯಲ್ಲಿದ್ದ ಸ್ಥಳೀಯರು ಮಮ್ಮಲ ಮರುಗಿದ್ದಾರೆ.