ಗದಗ: ಜಿಲ್ಲೆಯಲ್ಲಿ ಮಳೆ ಇಲ್ಲ ಅಂತ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದ್ರೆ, ಕೆಲ ರೈತರು ಇದ್ದ ಅಲ್ಪ ಸ್ವಲ್ಪ ನೀರಲ್ಲಿ ಹೆಸರು ಬಿತ್ತನೆ ಮಾಡಿದ್ರು. ಆದ್ರೆ, ಜಿಂಕೆಗಳ ಚಿನ್ನಾಟಕ್ಕೆ ಸಂಪೂರ್ಣ ಹೆಸರು ಬೆಳೆ ನಾಶವಾಗಿದೆ.
ಬೆಳಗ್ಗೆ, ಸಂಜೆ ಜಮೀನುಗಳಿಗೆ ಹೋದ್ರೆ ಸಾಕು ಹಿಂಡು ಹಿಂಡು ಜಿಂಕೆಗಳು ಕಣ್ಣಿಗೆ ಕಾಣ್ತವೆ. ಇವುಗಳ ತುಂಟಾಟ ಜಿಲ್ಲೆಯ ರೈತರನ್ನು ಕಂಗಾಲಾಗಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಇದ್ದಿದ್ದರಲ್ಲೆ ಸ್ವಲ್ಪ ಮಳೆಗೆ ತಮ್ಮ ಹೊಲದಲ್ಲಿನ ಕೃಷಿ ಹೊಂಡದಲ್ಲಿ ನಿಂತ ನೀರಿನ ಸಹಾಯದಿಂದ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಆದ್ರೆ, ಜಿಂಕೆಗಳ ಹಾವಳಿಗೆ ರೈತನ ಎಲ್ಲ ಶ್ರಮ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
ಪ್ರತಿ ವರ್ಷ ಜೂನ್, ಜುಲೈ ತಿಂಗಳ ಮಧ್ಯ ಭಾಗದಲ್ಲಿ ಜಿಂಕೆಗಳ ಹಾವಳಿ ಹೆಚ್ಚಿರುತ್ತೆ. ಗದಗ ತಾಲೂಕಿನ ಲಿಂಗದಾಳ ಗ್ರಾಮದ ರೈತರು ನಾಟಿಮಾಡಿದ್ದ ಹೆಸರು ಬೆಳೆ ಸರ್ವನಾಶವಾಗಿದೆ. ಪ್ರತಿ ವರ್ಷವೂ ನಮ್ಮ ಪರಿಸ್ಥಿತಿ ಹೀಗೆ ಆಗುತ್ತಿದೆ. ಅರಣ್ಯ ಇಲಾಖೆಗೆ ಪ್ರತಿ ವರ್ಷವೂ ಮನವಿ ಮಾಡಿದ್ರು ಪ್ರಯೋಜನವಾಗುತ್ತಿಲ್ಲ ಅಂತ ರೈತರು ಅಳಲು ತೋಡಿಕೊಂಡಿದ್ದಾರೆ.
ಗದಗ, ಮುಂಡರಗಿ, ಶಿರಹಟ್ಟಿ, ರೋಣ ತಾಲೂಕುಗಳಲ್ಲಿ ಜಿಂಕೆ ಕಾಟ ಹೆಚ್ಚಾಗಿದೆ. ಜಿಂಕೆ ಹಾವಳಿ ಬಗ್ಗೆ ರೈತರು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದ್ರೂ ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಮಾರನಬಸರಿ, ಜಕ್ಕಲಿ, ಲಿಂಗದಾಳ, ಹಳ್ಳಿಗುಡಿ, ಹರ್ಲಾಪೂರ, ಕಣಗಿನಾಳ, ಸಂಭಾಪೂರ , ಯಾವಗಲ್ಲ, ಅಸೂಟಿ, ಕರಮುಡಿ, ಮಾಳವಾಡ, ಶಿಗ್ಲಿ ಸೇರಿದಂತೆ ಕಪ್ಪತಗುಡ್ಡ, ಮಲಪ್ರಭಾ ನದಿ ದಂಡೆಯಲ್ಲಿರುವ ಗ್ರಾಮಗಳಲ್ಲಿ ಜಿಂಕೆಗಳ ಹಾವಳಿ ಹೆಚ್ಚಾಗಿದೆ.
ಬೆಳೆಗಳು ಚಿಗುರೊಡೆಯುತ್ತಿದ್ದಂತೆ ಜಿಂಕೆಗಳು ಬೆಳೆಗಳನ್ನು ಸಂಪೂರ್ಣ ತಿಂದು ಹಾಕುತ್ತಿವೆ. ಇದರಿಂದ ರೈತ ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಒಮ್ಮೆ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡುವುದೇ ದುಸ್ತರವಾಗಿದೆ. ಹೀಗಾಗಿ ಇಲ್ಲೊಂದು ಜಿಂಕೆ ವನ ಸ್ಥಾಪಿಸುವ ಮೂಲಕ ಜಿಂಕೆ ಕಾಟ ತಪ್ಪಿಸಬೇಕಿದೆ ಎಂಬುದು ರೈತರ ಆಗ್ರಹವಾಗಿದೆ.