ಗದಗ : ಇದೇ ತಿಂಗಳ 24ರ ನಂತರ ಗದಗ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 24 ತಾರೀಖಿನವರೆಗೆ ರಾಜ್ಯದಲ್ಲಿ ಯಥಾಸ್ಥಿತಿ ಮುಂದುವರೆಸಲು ಸರ್ಕಾರ ತೀರ್ಮಾನಿಸಿದೆ. ಜಿಲ್ಲೆಯ ಕೋವಿಡ್ ವಿಚಾರಕ್ಕೆ ನಿನ್ನೆ ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದೇನೆ. ಮಾಹಿತಿ ಪ್ರಕಾರ ಪಾಸಿಟಿವ್ ರೇಟ್ ತಗ್ಗುವ ಸಾಧ್ಯತೆಗಳಿವೆ. ಹೀಗಾಗಿ ಸೋಂಕಿತರ ಸಂಖ್ಯೆ ನೋಡಿಕೊಂಡು ಲಾಕ್ ಡಾನ್ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಮೋದಿ ಹೆಸರು ಕೆಡಿಸಲಾಗುತ್ತಿದೆ. ಈ ಟೂಲ್ ಕಿಟ್ನ ಪ್ರಮುಖ ರೂವಾರಿ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅಂತ ಸಚಿವ ಸಿ ಸಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ, ರಾಷ್ಟ್ರದಲ್ಲಿರುವ ಬಿಜೆಪಿ ವರ್ಚಸ್ಸು ಕುಂದಿಸಲು ಕಾಂಗ್ರೆಸ್ ನಾಯಕರು ಕಾರ್ಯನಿರತರಾಗಿದ್ದಾರೆ. ಏನೇನು ವೈಭವೀಕರಿಸಬೇಕು ಅನ್ನೋದನ್ನ ನಿರ್ಧರಿಸಲಾಗಿದೆ, ಬಿಜೆಪಿ ಜೊತೆ ಭಿನ್ನಾಭಿಪ್ರಾಯ ಹೊಂದಿದವರ ಸಹಾಯ ಪಡೆಯಲಾಗಿದೆ. ಸೋಕಾಲ್ಡ್ ಬುದ್ಧಿ ಜೀವಿಗಳು, ಗೋಮಾಂಸ ತಿನ್ನುವಂಥವರ ಸಹಾಯ ಪಡೆಯಲಾಗಿದೆ ಎಂದು ದೂರಿದರು.
ಕಾಂಗ್ರೆಸ್ ಎಷ್ಟರ ಮಟ್ಟಿಗೆ ಕೆಳಮಟ್ಟಕ್ಕೆ ಹೋಗಿದೆ ಅನ್ನೋದನ್ನ ದೇಶ ಅರ್ಥ ಮಾಡಿಕೊಳ್ಳಬೇಕು. ಪ್ರಾಮಾಣಿಕವಾಗಿ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲವಾಗಿರೋಣ, ಕೊರೊನಾ ವಿರುದ್ಧ ನೂರಕ್ಕೆ ನೂರು ಜಯಗಳಿಸುವ ವಿಶ್ವಾಸ ಪ್ರಧಾನಿ ಅವರಿಗಿದೆ ಎಂದು ಸಚಿವ ಸಿ ಸಿ ಪಾಟೀಲ್ ಹೇಳಿದರು.
ಇದೇ ವೇಳೆ ಉಸ್ತುವಾರಿ ಸಚಿವರ ಮೇಲೆ ಸಿಎಂಗೆ ವಿಶ್ವಾಸ ಇಲ್ಲ ಎಂದಿದ್ದ ಗದಗ ಶಾಸಕ ಹೆಚ್ ಕೆ ಪಾಟೀಲ ಅವರಿಗೆ ತಿರುಗೇಟು ನೀಡಿ, ಹೆಚ್ ಕೆ ಪಾಟೀಲರು ಹೇಳುವುದೆಲ್ಲ ವೇದ ವಾಕ್ಯವೇ?. ಅವರು ಸಚಿವರಾಗಿದ್ದಾಗ ಕೋವಿಡ್ ಬಂದಿದ್ದರೆ, ಹೆಣಗಳು ರಸ್ತೆಯಲ್ಲಿ ಬೀಳುತ್ತಿದ್ದವು. ಅವರು ಕೆವಿಕೆಯಲ್ಲಿ ಕದ ಹಾಕಿಕೊಂಡು ಕೂರುತ್ತಿದ್ದರು ಎಂದು ಹರಿಹಾಯ್ದರು.