ಗದಗ: ಮೃತ ವೃದ್ಧೆಯ ಶವವನ್ನು ಕೊರೊನಾ ವರದಿ ಬರುವ ಮೊದಲೇ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಸುಂದರೇಶ್ ಬಾಬು ಅವರು ಆರೋಗ್ಯ ಇಲಾಖೆ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಕಳೆದ 17 ರಂದು ಅನಾರೋಗ್ಯ ಸಮಸ್ಯೆಯಿಂದ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ ವೃದ್ಧೆ ಜಿಮ್ಸ್ ನಲ್ಲಿ ಮೃತರಾಗಿದ್ದರು. ಅವರ ಕೊರೊನಾ ವರದಿ ಬರುವ ಮೊದಲೇ ವೃದ್ಧೆಯ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಜೊತೆಗೆ ಅಂತ್ಯಸಂಸ್ಕಾರವನ್ನು ಸಹ ಕುಟುಂಬಸ್ಥರು, ಗ್ರಾಮಸ್ಥರು ಸೇರಿ ಮಾಡಿದ್ದರು.
ಮೃತರಿಗೆ ಕೊರೊನಾ ಪಾಸಿಟಿವ್ ಎಂದು ಆರೋಗ್ಯ ಇಲಾಖೆ 22 ರಂದು ವರದಿ ನೀಡಿತ್ತು. ಇದರಿಂದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದವರಿಗೆಲ್ಲ ಆತಂಕ ಮೂಡಿದ್ದು, ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನ ಬಗ್ಗೆ ಈ ಈಟಿವಿ ಭಾರತದಲ್ಲಿ "ಅಂತ್ಯ ಸಂಸ್ಕಾರದ ಬಳಿಕ ಪಾಸಿಟಿವ್ ದೃಢ : ಊರು ತೊರೆಯುತ್ತಿರುವ ಗ್ರಾಮಸ್ಥರು" ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತ್ತು.
ಈ ಹಿನ್ನೆಲೆ ಗದಗ ಎಸಿ ರಾಯಪ್ಪ ಹುಣಸಗಿ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿ ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.