ಗದಗ: ಒಂದು ಕಡೆ ಎಸ್ಎಸ್ಎಲ್ಸಿ ಪರೀಕ್ಷೆ. ಇನ್ನೊಂದೆಡೆ ಮನೆಯಲ್ಲಿ ತಂದೆಯ ಸಾವು. ಈ ಹುಡುಗಿ ಜೀವನದಲ್ಲಿ ಇದೆಂತಹಾ ಅವಘಡ. ಯಾರಿಗಾದರೂ ಕರಳು ಕಿತ್ತು ಬರದೆ ಇರಲಾರದು.
ಹೌದು, ಗದಗನಲ್ಲಿ ಇಂತಹ ಹೃದಯ ವಿದ್ರಾವಕ ಘಟನೆ ನಡೆದಿದೆ. ಬಾಲಕಿಯೊಬ್ಬಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯೋಕೆ ಅಂತ ಹೊರಟು ಬರೋ ಸಮಯದಲ್ಲಿ ಅತ್ತ ಮನೆಯಲ್ಲಿ ತಂದೆಯ ಸಾವಾಗಿದೆ. ಗದಗ ನಗರದ ಈಶ್ವರ ಬಡಾವಣೆ ನಿವಾಸಿ ಪ್ರಾಥಮಿಕ ಶಿಕ್ಷಕರಾಗಿದ್ದ ಸುರೇಶ್ ಬಜಂತ್ರಿ ಎಂಬುವರು ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದಾರೆ. ಅವರಿಗೆ ಇದ್ದ ಒಬ್ಬಳೇ ಮಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಅನಿವಾರ್ಯವಾಗಿ ಮಗಳು ಅನುಷಾ ಭಜಂತ್ರಿ ಪರೀಕ್ಷೆಗೆ ಹಾಜರಾಗಿದ್ದಾಳೆ.
ಜೆಟಿ ಹೈಸ್ಕೂಲ್‌ನಲ್ಲಿ ಓದುತ್ತಿರುವ ಅನುಷಾ ಕೆ.ಹೆಚ್.ಪಾಟೀಲ್, ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯೋದಕ್ಕೆ ಬಂದಿದ್ದಾಳೆ. ಬಾಲಕಿಗೆ ಇಂತಗ ಸಂದಿಗ್ಧ ಸನ್ನಿವೇಶದಲ್ಲಿ ಬಿಇಓ ಕೆಳದಿಮಠ ಅವರು ಸೇರಿದಂತೆ ಎಲ್ಲಾ ಸಹ ಶಿಕ್ಷಕರು ಅವಳಿಗೆ ಸಾಂತ್ವನ ಹೇಳಿ ಪರೀಕ್ಷೆ ಬರೆಯಲು ಧೈರ್ಯ ತುಂಬಿದ್ದಾರೆ.
ಇಂದು ಹಿಂದಿ ಭಾಷಾ ಪರೀಕ್ಷೆ ಬರೆಯಬೇಕಿದ್ದ ಮಗಳ ಜೊತೆಗೆ ಬಂದು ಧೈರ್ಯ ತುಂಬಬೇಕಿದ್ದ ಅಪ್ಪ, ಈಗ ಅವಳಿಗೆ ನೆನಪು ಮಾತ್ರ. ಹಾಗಿದ್ದರೂ ಆಕೆ ಪರೀಕ್ಷೆ ಬರೆಯೋದಕ್ಕೆ ಬಂದಿರೋದು ಮೆಚ್ಚುಗೆಯ ವಿಷಯ.
ಇನ್ನು ಆಕೆಯ ತಂದೆ ಸುರೇಶ್, ಗದಗದ 9ನೇ ನಂಬರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಬಹಳ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ಬೆನ್ನು ನೋವಿನ ಸರ್ಜರಿ ಸಹ ಆಗಿತ್ತು. ಅದೇ ನೋವಿನಿಂದ ಅವರು ಕೆಲ ದಿನಗಳಿಂದ ಬೆಡ್ ರೆಸ್ಟ್ನಲ್ಲಿದ್ದರು. ಆದ್ರೆ ಈಗ ದಿಢೀರ್ ಸಾವನ್ನಪ್ಪಿದ್ದಾರೆ. ಇನ್ನು ಆಕೆಯ ಪರೀಕ್ಷೆ ಮುಗಿಯುವವರೆಗೂ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಆಕೆಯ ಮನೆಯವರು ಹೇಳಿದ್ದಾರೆ.