ಗದಗ: ಬಡವರ ಪಾಲಿಗೆ ವರದಾನವಾಗಬೇಕಾದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ಸಿಗ್ತಾಯಿಲ್ಲ ಅನ್ನೋ ಕಾರಣಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಸುಮಾರು 200 ಕ್ಕೂ ಹೆಚ್ಚು ಬಡ ಕೂಲಿ ಕಾರ್ಮಿಕರು ಪ್ರತಿಭಟಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷ ಗಣೇಶ್ ನಾಯಕ್ ಹಾಗೂ ಪಂಚಾಯತಿ ಅಧಿಕಾರಿಗಳನ್ನು ನಮಗೆ ಉದ್ಯೋಗ ಕೊಡಿ ಅಂತಾ ಕೇಳಿದ್ರೂ ಕೂಡಾ ಕ್ಯಾರೆ ಅಂತಿಲ್ಲ. ಹೀಗಾದ್ರೆ ಬರಗಾಲದ ದಿನದಲ್ಲಿ ಹೊಟ್ಟೆಪಾಡಿಗೆ ಏನು ಮಾಡುವುದು ಎಂದು ಅಳಲು ತೋಡಿಕೊಂಡ ಕೂಲಿ ಕಾರ್ಮಿಕರು, ಗುದ್ದಲಿ-ಸಲಿಕೆ ಹಿಡಿದು ಬಂದು ಗ್ರಾಮ ಪಂಚಾಯತಿಗೆ ಬೀಗ ಜಡಿದಿದ್ದಾರೆ.
ಮಹಿಳೆಯರೊಂದಿಗೆ ಬಂದ ಕೂಲಿ ಕಾರ್ಮಿಕರು ಗ್ರಾಮ ಪಂಚಾಯತಿ ಅಧ್ಯಕ್ಷರನ್ನ ಹಾಗೂ ಸದಸ್ಯರನ್ನ ತರಾಟೆಗೆ ತಗೆದುಕೊಂಡರು. ಅಲ್ಲದೆ ದುಡಿಯುವ ಕೈಗಳಿಗೆ ಕೆಲಸ ಸಿಗದಿರೋದಕ್ಕೆ ಆಕ್ರೋಶಗೊಂಡ ಕಾರ್ಮಿಕರು ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದರು.