ಗದಗ: ಮಾಹಾಮಾರಿ ಕೊರೊನಾ ವೈರಸ್ ಹರಡದಂತೆ ಗದಗ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರು ಚೆಕ್ ಪೋಸ್ಟ್ ತೆರೆದಿದ್ದು, 24 ಗಂಟೆ ಕೆಲಸ ನಿರ್ವಹಿಸುತ್ತಿವೆ. ಮನೆಯಲ್ಲಿ ನಿಗಾದಲ್ಲಿ ಇರುವವರು ಹೊರಗಡೆ ಬರುತ್ತಿರುವುದು ಕಂಡು ಬಂದಿದ್ದು, ನಿಗಾದಲ್ಲಿ ಇರುವವರು ಹೊರಗಡೆ ಬಂದರೆ ಅಂತಹವರನ್ನು ಕೂಡಿ ಹಾಕಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಹಾಗಾಗಿ ನಿಗಾದಲ್ಲಿ ಯಾರು ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡರು.
ಚೆಕ್ ಪೋಸ್ಟ್ಗಳಲ್ಲಿ ಕೆಲಸ ಮಾಡುವವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಗುತ್ತದೆ. ಕೊರೊನಾ ವೈರಸ್ ಎದುರಿಸಲು ಹಣಕಾಸಿನ ಕೊರತೆಯಿಲ್ಲ ಎಂದರು. ಜಿಲ್ಲೆಯಲ್ಲಿ 173 ಜನರ ಮೇಲೆ ನಿಗಾವಹಿಸಲಾಗಿದ್ದು, 28 ದಿನಗಳ ಕಾಲ ಪೂರೈಕೆ ಮಾಡಿದವರು 11 ಜನರಿದ್ದಾರೆ. ಮನೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿ ಇರುವವರು 157 ಜನರು, ವೈದ್ಯಕೀಯ ಸೌಲಭ್ಯದೊಂದಿಗೆ ಪ್ರತ್ಯೇಕವಾಗಿ ನಿಗಾದಲ್ಲಿ ಇರುವವರು 5 ಜನ, ಈವರೆಗೆ ರಕ್ತದ ಮಾದರಿ ಹಾಗೂ ಗಂಟಲಿನ ದ್ರವವನ್ನ ತಪಾಸಣೆಗೆ ಕಳುಹಿಸಿರುವ 42 ವರದಿಗಳ ಪೈಕಿ 37 ನೆಗೆಟಿವ್, 5 ವರದಿಗಳಿಗಾಗಿ ಬರಬೇಕಾಗಿದೆ ಎಂದರು.
ಇನ್ನೂ ಮದ್ಯ, ಮಾಂಸ, ಮೀನು ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಹೆಚ್ಚಿಗೆ ಬೆಲೆ ಮಾರಾಟ ಮಾಡಲಾಗುತ್ತದೆ ಎಂಬ ಆರೋಪಗಳಿವೆ. ಅಂಥವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಜಿಲ್ಲೆಯ ಜನರು ಕೂಲಿ ಕೆಲಸಕ್ಕೆಂದು ಗೋವಾಕ್ಕೆ ಹೋಗಿರುವವರಿಗೆ ಅಲ್ಲಿಯೇ ಸೌಲಭ್ಯ ಕಲ್ಪಿಸುವಂತೆ ಸರ್ಕಾರಗಳೊಂದಿಗೆ ಮಾತನಾಡಲಾಗಿದೆ ಎಂದರು.