ಗದಗ: ತಾಲೂಕಿನ ಹರ್ತಿ ಗ್ರಾಮದಲ್ಲಿ ಮಾವನ ಮನೆಗೆ ಹೆಂಡತಿಯನ್ನು ಬಿಡಲು ಬಂದಿದ್ದ ಅಳಿಯ ಪತ್ನಿ ಜೊತೆಗೆ ತನಗಿದ್ದ ಕೊರೊನಾ ಸೋಂಕನ್ನೂ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಜೂನ್ 5ರಂದು ಹುಬ್ಬಳ್ಳಿಯ ವ್ಯಕ್ತಿ ತನ್ನ ಪತ್ನಿಯನ್ನು ಕರೆದುಕೊಂಡು ಮಾವನ ಮನೆಗೆ ಬಂದಿದ್ದಾನೆ. ಆದ್ರೆ ಆತನ ದೇಹದಲ್ಲಿ ಕೊರೊನಾ ಸೋಂಕು ಇದ್ದಿದ್ದು ಇನ್ನೂ ಪತ್ತೆಯಾಗಿರಲಿಲ್ಲ. ಮಾವನ ಮನೆಗೆ ಬಂದು ಪತ್ನಿ, ಮಗುವನ್ನು ಬಿಟ್ಟು ಜೂನ್ 6ರಂದು ಹುಬ್ಬಳ್ಳಿಗೆ ವಾಪಸಾಗಿದ್ದಾನೆ. ಜೂನ್ 7ರಂದು ಆತನ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಗ ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಈತನ ಟ್ರಾವೆಲ್ ಹಿಸ್ಟರಿ ತಿಳಿದ ಧಾರವಾಡ ಜಿಲ್ಲಾಡಳಿತ ಗದಗ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
ತಕ್ಷಣ ಎಚ್ಚೆತ್ತುಕೊಂಡ ಗದಗ ಜಿಲ್ಲಾಡಳಿತ ಆತನ ಮನೆಯ ಎಲ್ಲರನ್ನೂ ಕೋವಿಡ್-19 ಪರೀಕ್ಷೆಗೆ ಅಳವಡಿಸಿದೆ. ಗದಗದಲ್ಲಿನ ಮಾವನ ಮನೆಗೆ ಆತ ತೆರಳಿದ್ದರಿಂದ ಅಲ್ಲಿನ ಇಬ್ಬರಿಗೂ ಸೋಂಕು ತಗುಲಿದೆ. ಹೀಗಾಗಿ ನೆಮ್ಮದಿಯಾಗಿದ್ದ ಹರ್ತಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಈತ ಬೆಳೆ ಸಾಲ ಸಂಬಂಧ ಹರ್ತಿ ಗ್ರಾಮದ ಕೆವಿಜಿ ಬ್ಯಾಂಕ್ಗೂ ಹೋಗಿ ಬಂದಿದ್ದಾನೆ ಎನ್ನಲಾಗಿದೆ.
ವ್ಯಕ್ತಿಯ ಪತ್ನಿ, ಮಗಳಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಇಬ್ಬರ ವರದಿಯೂ ನೆಗೆಟಿವ್ ಬಂದಿದೆ. ಆದರೆ ರೋಗಿಯ ಪತ್ನಿಯ ಅಕ್ಕ(45) ಮತ್ತು ಮನೆಯ 23 ವರ್ಷದ ಯುವಕನಿಗೆ ಸೋಂಕು ಇರುವುದು ದೃಢವಾಗಿದೆ.
ಇಷ್ಟಕ್ಕೆ ನಿಲ್ಲದ ಕೊರೊನಾ ಮನೆಯಿಂದ ಹೊರಗೂ ಹರಡಿದೆ. ವ್ಯಕ್ತಿಯ ಮಾವನ ಮನೆಯ P-7834, (23 ವರ್ಷದ ಯುವಕ)ನಿಗೆ ವೈದ್ಯ ಚಿಕಿತ್ಸೆ ನೀಡಿದ್ದು, ವೈದ್ಯನಿಗೂ ಕೊರೊನಾ ಸೋಂಕು ತಗುಲಿದೆ.