ಗದಗ: ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬ ತನ್ನ ಪತ್ನಿಗೆ ಕಿರುಕುಳ ನೀಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದೆ.
ನಗರದ ಶಹಪೂರಪೇಟೆ ಪೊಲೀಸ್ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಗಂಗಮ್ಮ ಹೇಮಂತಪ್ಪ ಪರಸಣ್ಣವರ್(27) ಮೃತ ದುರ್ದೈವಿ. ಈಕೆಯ ಗಂಡ ಹೇಮಂತ ಪರಸಣ್ಣವರ್ ಗದಗ ಗ್ರಾಮೀಣ ಮುಖ್ಯ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಹೆಂಡತಿಗೆ ತುಂಬ ಕಿರುಕುಳ ನೀಡುತ್ತಿದ್ದನಂತೆ. ಈತನೇ ತಮ್ಮ ಮಗಳನ್ನು ಕೊಂದಿದ್ದಾನೆ ಅಂತಾ ಕುಟುಂಬಸ್ಥರು ಆರೋಪಿಸ್ತಿದ್ದಾರೆ.
ಕಳೆದ 8 ವರ್ಷಗಳಿಂದ ಈತ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದಲ್ಲದೇ ಹಿಂಸಿಸುವ ವಿಡಿಯೋವನ್ನೂ ಸ್ವತಃ ತಾನೇ ಸೆರೆ ಹಿಡಿಯುತ್ತಿದ್ದನಂತೆ. ಆತ ಪತ್ನಿಯನ್ನು ಮನೆಯ ಮುಂಭಾಗ ಅಟ್ಟಾಡಿಸಿ ಹೊಡೆಯುವುದು, ಇದನ್ನೆಲ್ಲಾ ನೋಡಿಯೂ ನೋಡದಂತೆ ಅತ್ತೆ-ಮಾವನೇ ಮಗನನ್ನು ಪ್ರಚೋದಿಸುತ್ತಿರುವುದೂ ಕೂಡ ಈತನೆ ಸೆರೆ ಹಿಡಿದಿದ ವಿಡಿಯೋದಲ್ಲಿದೆ ಎಂದು ಮೃತ ಗಂಗಮ್ಮಳ ಪಾಲಕರು ಆಪಾದಿಸುತ್ತಿದ್ದಾರೆ.
ಈತ ಚಹಾ ಮಾಡು ಬಂದು ಚಹಾ ಕುಡಿದು ನಿನ್ನ ನೇಣು ಹಾಕುತ್ತೀನಿ ಅಂತಾ ಪತ್ನಿಗೆ ಹೇಳಿಹೋಗಿದ್ದನಂತೆ. ಆಗ ಲಕ್ಷ್ಮಿ ತನ್ನ ತಂದೆ-ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ತವರು ಮನೆಯವರು ಎಷ್ಟೇ ಅಂಗಲಾಚಿ ಬೇಡಿದರೂ ಬಿಡಲಿಲ್ಲ. ಗಂಡನೇ ಹೊಡೆದು ನೇಣು ಬಿಗಿದು ಕೊಲೆ ಮಾಡಿದ್ದಾನೆ ಅಂತಾ ಸಂಬಂಧಿಕರು ಗೋಳಾಡಿದರು.
ಗದಗ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಗಮ್ಮನನ್ನು ಆಕೆಯ ಪತಿ ಹೇಮಂತಪ್ಪ, ಮಾವ ಬಸವಂತಪ್ಪ ಹಾಗೂ ಅತ್ತೆ ಯಲ್ಲವ್ವ ಸೇರಿ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಈ ಮೂವರು ಆರೋಪಿಗಳು ಸದ್ಯ ನಾಪತ್ತೆಯಾಗಿದ್ದಾರೆ.