ಗದಗ: ಸಿಎಂ ಕುಟುಂಬದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ ಎಂಬ ಯತ್ನಾಳ ಆರೋಪಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸಿಡಿಮಿಡಿಗೊಂಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಬೇಕೆಂದು ಹುಟ್ಟಿದ ಪಕ್ಷ ಕಾಂಗ್ರೆಸ್. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದವರು. ನಮಗೆ ಧ್ವನಿ ಎತ್ತುವುದು ಗೊತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಭಾರತೀಯ ಅಂತಾ ಹೆಮ್ಮೆಯಿಂದ ಹೇಳುವಂತೆ ಮಾಡಿದ ಪಕ್ಷ ನಮ್ಮದು, 60 ವರ್ಷದಲ್ಲಿ ನಿರ್ಮಾಣ ಮಾಡಿದ ಶಕ್ತಿಶಾಲಿ ರಾಷ್ಟ್ರವನ್ನು ಬಿಜೆಪಿ 6-7 ವರ್ಷದಲ್ಲಿ ನಾಶ ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿನ ಮುಂದಿನ ಮುಖ್ಯಮಂತ್ರಿ ಚರ್ಚೆ ವಿಚಾರವಾಗಿ ಮಾತನಾಡುತ್ತಾ, ದಲಿತರು, ಹಿಂದುಳಿದವರು, ಲಿಂಗಾಯತರೂ ಮುಂದಿನ ಸಿಎಂ ಆಗಲಿ ಅನ್ನೋದು ಸಹಜ. ಆದರೆ ಮುಖ್ಯಮಂತ್ರಿ ವಿಚಾರ ಹಾದಿ ಬೀದಿಯಲ್ಲಿ ನಿರ್ಣಯ ಆಗುವುದಲ್ಲ. ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆ ಎದುರಿಸಲಿದೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟವಾಗಲಿದೆ, ಬಿಜೆಪಿಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮಿತಿಮೀರಿ ನಡೆದಿದೆ, ಕರ್ನಾಟಕದಲ್ಲಿ ಸಂವಿಧಾನದ ಆಸೆಗಳಿಗೆ ವಿರುದ್ಧವಾಗಿ ಸರ್ಕಾರ ನಡೆಯುತ್ತಿದೆ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: 2 ರೂಪಾಯಿಗೆ ಔಷಧ, 8 ಲಕ್ಷ ರೋಗಿಗಳ ಸೇವೆ: ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಡಾ.ಮಹೇಂದ್ರಭಾಯ್