ಗದಗ: ಕಾಂಗ್ರೆಸ್ ಬೆಂಕಿ ಹಾಕಿರೋದು ಈ ರಾಷ್ಟ್ರದ ವಸ್ತುಗಳಿಗೆ ಅಲ್ಲ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಯೋಜನೆಗಳಿಗೆ ಬೆಂಕಿ ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ವೈ ರೈತರು ಹಾಗೂ ನೀರಾವರಿ ಯೋಜನೆ ಕುರಿತು ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರ ಜನ್ಮದಿನದಂದು ಕೇಂದ್ರ ಸರ್ಕಾರ ಕಳಸಾ ಬಂಡೂರಿ, ಮಹದಾಯಿ ವಿಷಯದಲ್ಲಿ ಶುಭ ಸುದ್ದಿ ನೀಡಿದೆ ಎಂದರು. ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಈಗ ರೈತ ಹೋರಾಟಗಾರರಿಗೆ ನ್ಯಾಯ ಸಿಕ್ಕಿದೆ. ಬಿಎಸ್ವೈ ಬಜೆಟ್ನಲ್ಲಿ ರೈತಪರ ಬಜೆಟ್ ಮಂಡನೆಯಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿ ಗಲಭೆ ಕುರಿತು ಮಾತನಾಡಿದ ಅವರು, ಮಂಗಳೂರು ಹಾಗೂ ದೆಹಲಿ ಗಲಭೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು. ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐನವರು ಮೌಲ್ವಿಯನ್ನು ಕೊಲೆ ಮಾಡುವವರೆಗೆ ಹೋಗಿದ್ದಾರೆ. ಗಲಭೆ ಹಿಂದೆ ಈ ಸಂಘಟನೆಗಳು ಇರೋದು ಪೊಲೀಸ್ ಇಲಾಖೆಯಿಂದ ಬಹಿರಂಗವಾಗಿದೆ. ಈ ಸಂಘಟನೆಗಳು ನಿಷೇಧವಾಗಬೇಕು ಎಂದು ಆಗ್ರಹಿಸಿದರು.
ದೆಹಲಿಯಲ್ಲಿ ಎರಡು ತಿಂಗಳಿಂದ ಹೋರಾಟ ನಡೆದಿದೆ. ಗಲಭೆ ಆಗಿಲ್ಲ. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಬರುವ ವೇಳೆ ಗಲಭೆ ಯಾಕೆ ಜೋರಾಯಿತು? ಶಾಂತಿಯುತ ಪ್ರತಿಭಟನಾಕಾರರ ಮಧ್ಯ ಪಿಸ್ತೂಲ್, ಕಲ್ಲುಗಳು, ಶಸ್ತ್ರಾಸ್ತ್ರಗಳು ಹೇಗೆ ಬಂದವು? ಇದರ ಹಿಂದೆ ಕಾಂಗ್ರೆಸ್ನ ಮಾಸ್ಟರ್ ಮೈಂಡ್ ಇದೆ ಎಂದು ಗಂಭೀರವಾಗಿ ಆರೋಪಿಸಿದರು.