ಗದಗ: ಜಿಲ್ಲೆಯಲ್ಲಿ ಮತ್ತೆ ಮಲಪ್ರಭಾ ನದಿಯ ಆರ್ಭಟ ಹೆಚ್ಚಾಗಿದೆ. ಎರಡು ದಿನಗಳಿಂದ ಕಡಿಮೆಯಾಗಿದ್ದ ಮಲಪ್ರಭಾ ನದಿಯ ಪ್ರವಾಹ ಈಗ ಮತ್ತೆ ಹೆಚ್ಚಾಗಿದೆ.
ನಿನ್ನೆ ನವಲುತೀರ್ಥ ಜಲಾಶಯದಿಂದ ಮತ್ತಷ್ಟು ನೀರು ಬಿಡಲಾಗಿದ್ದು, ಇದರಿಂದ ನದಿಯ ಪ್ರವಾಹ ಹೆಚ್ಚಾಗಿದೆ. ಹೀಗಾಗಿ ನದಿ ಪಾತ್ರದ ಜನರಿಗೆ ಈಗ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.
ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಸ್ಮಶಾನ ಜಲಾವೃತವಾದ ಪರಿಣಾಮ ರಸ್ತೆ ಬದಿಯಲ್ಲಿಯೇ ಗ್ರಾಮಸ್ಥರು ಶವ ಸಂಸ್ಕಾರ ಮಾಡಿದ್ದಾರೆ. ಕಳೆದ ವಾರವಷ್ಟೇ ಮಲಪ್ರಭಾ ನದಿಯ ಪ್ರವಾಹಕ್ಕೆ ಮುಳುಗಡೆಯಾಗಿದ್ದ ಸ್ಮಶಾನ ಮತ್ತೆ ಈಗ ಜಲಾವೃತವಾಗಿದೆ.
ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಏನು ಮಾಡೋದು ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಕಾಡುತ್ತಿದೆ. ನದಿಯ ಪ್ರವಾಹಕ್ಕೆ ಕೊಣ್ಣೂರು ಬಳಿಯ ಕಿರು ಸೇತುವೆ ಕೂಡ ಜಲಾವೃತವಾಗಿದೆ. ಜೊತೆಗೆ ನದಿ ಪಕ್ಕದ ಜಮೀನುಗಳಲ್ಲಿ ಬೆಳೆಗಳು ಮತ್ತೆ ಪ್ರವಾಹಕ್ಕೆ ಸಿಲುಕಿದ್ದು, ರೈತರು ಚಿಂತೆಗೀಡಾಗಿದ್ದಾರೆ.