ಗದಗ: ಉತ್ತರ ಕರ್ನಾಟಕದ ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಪ್ರವಾಹ ಹಿನ್ನೆಲೆ ನೂತನ ಸಚಿವ ಸಿ.ಸಿ. ಪಾಟೀಲ್ ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಪ್ರವಾಹಕ್ಕೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು.
ಪ್ರವಾಹಕ್ಕೆ ತುತ್ತಾದ ಸಂತ್ರಸ್ತರ ಕಷ್ಟಗಳನ್ನ ಆಲಿಸಿ, ಆದಷ್ಟು ಬೇಗನೆ ಬಗೆಹರಿಸೋದಾಗಿ ಭರವಸೆ ನೀಡಿದರು. ನಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಟೀಲ್ ತುಸು ಸ್ಟ್ರಾಂಗ್ ಆಗಿಯೇ ಅಧಿಕಾರಿ ವರ್ಗಕ್ಕೆ ಖಡಕ್ ವಾರ್ನಿಂಗ್ ಕೊಟ್ರು. ಅಲ್ಲದೇ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಿದ್ದ ಡಿಹೆಚ್ಓಗೆ ಕ್ಲಾಸ್ ತೆಗೆದುಕೊಂಡರು. ಜಿಲ್ಲೆಯಲ್ಲಿ ಎಷ್ಟು ಗ್ರಾಮದಲ್ಲಿ ಪ್ರವಾಹ ಎದುರಾಗಿದೆ ಅಂತ ಸಚಿವರು ಕೇಳಿದ್ದಕ್ಕೆ ಕಂಗಾಲಾದ ಡಿಹೆಚ್ಒ ಉತ್ತರ ನೀಡೋಕೆ ತಡಬಡಾಯಿಸಿದಾಗ ಕೋಪಗೊಂಡ ಅವರು ಸಭೆಯಲ್ಲಿ ಡಿಹೆಚ್ಓ ವಿರೂಪಾಕ್ಷ ರೆಡ್ಡಿ ವಿರುದ್ಧ ಹರಿಹಾಯ್ದರು.
ಆದಷ್ಟು ಬೇಗ ನಿಮ್ಮ ವರ್ತನೆಯನ್ನ ಸರಿ ಮಾಡಿಕೊಳ್ಳಿ ಎಂದು ವಾರ್ನ್ ಮಾಡಿದ ಸಚಿವರು, ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಪರೋಕ್ಷವಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಶಾಸಕರಾದ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ, ಡಿಸಿ ಎಂ.ಜಿ.ಹಿರೇಮಠ, ಎಸ್ಪಿ ಶ್ರೀನಾಥ್ ಜೋಶಿ, ಜಿ.ಪಂ. ಸಿಇಒ ಮಂಜುನಾಥ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.