ಗದಗ: ಜ.17 ರ ನಂತರ ರಾಜ್ಯಕ್ಕೆ ಅಮಿತ್ ಶಾ ಬರಲಿದ್ದಾರೆ. ಅವರು ಬಂದ ನಂತರ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಅನರ್ಹ ಶಾಸಕರನ್ನು ಅರ್ಹರನ್ನಾಗಿ ಮಾಡಿ, ಬಿಎಸ್ವೈ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಸಚಿವ ಸಂಪುಟಕ್ಕೆ ಯಾರನ್ನು ಆಯ್ಕೆ ಮಾಡಬೇಕು, ಯಾರನ್ನು ಕೈ ಬಿಡಬೇಕು ಎನ್ನುವುದು ಸಿಎಂಗೆ ಹಾಗೂ ರಾಜ್ಯಾಧ್ಯಕ್ಷರಿಗೆ ಬಿಟ್ಟ ವಿಚಾರ ಎಂದರು. ಇನ್ನು ದಲಿತ ಸಿಎಂ ವಿಚಾರ ಕುರಿತು ಶಾಸಕ ರಾಜುಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಸಿಎಂ ಆಗಿ ಬಿಎಸ್ವೈ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದರು.
ಉಪ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿರಲಿಲ್ಲ. ಆದರೆ ಕೆಆರ್ ಪೇಟೆಯಲ್ಲಿ ಗೆಲುವು ಸಾಧಿಸಿದ್ದು ನಮಗೆ ದೊಡ್ಡ ಶಕ್ತಿ ಬಂದಿದೆ. ಹೀಗಾಗಿ, ರಾಜ್ಯಾದ್ಯಂತ ಪಕ್ಷವನ್ನು ಸಂಘಟನೆ ಮಾಡುವ ಉದ್ದೇಶದಿಂದ ಪ್ರವಾಸ ಮಾಡುತ್ತಿದ್ದೇನೆ ಎಂದರು. ಆಡಳಿತದಲ್ಲಿ ತಮ್ಮ ಹಸ್ತಕ್ಷೇಪ ಕುರಿತು ಮಾತನಾಡಿದ ಅವರು, ಸರ್ಕಾರದಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಅವೆಲ್ಲಾ ಕೇವಲ ಆರೋಪಗಳು ಮಾತ್ರ. ಒಳ್ಳೆ ಕೆಲಸ ಆಗುತ್ತಿರುವಾಗ ವಿರೋಧ ಪಕ್ಷದವರು ಆರೋಪ ಮಾಡ್ತಾರೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಕುರಿತು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ವಿಜಯೇಂದ್ರ, ವಿನಾಕಾರಣ ದೇಶದಲ್ಲಿ ಹಾಗೂ ರಾಜ್ಯದಲ್ಲಿ ವಿರೋಧ ಪಕ್ಷಗಳು ಗೊಂದಲ ಸೃಷ್ಟಿ ಮಾಡುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ನಮ್ಮ ದೇಶದ ಯಾವುದೇ ಪ್ರಜೆಗೆ ತೊಂದರೆಯಾಗುವುದಿಲ್ಲ. ವಿರೋಧ ಪಕ್ಷದವರು ಜನರಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತದ್ದಾರೆ ಎಂದರು.
ಇನ್ನು ಗದಗ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡಿ, ಇದು ಭಾರತೀಯ ಜನತಾ ಪಕ್ಷ, ಜನತಾ ದಳ ಅಲ್ಲ. ದೇಶದಲ್ಲಿ ರಾಜ್ಯದಲ್ಲಿ ಎರಡೂ ಕಡೆ ಪಕ್ಷದ ಆಡಳಿತವಿದ್ದಾಗ ಪೈಪೋಟಿ ಸಹಜ. ಪಕ್ಷ ತೀರ್ಮಾನ ಮಾಡಿದ ಮೇಲೆ ಎಲ್ರೂ ಒಗ್ಗಟ್ಟಾಗಿ ಕೆಲಸ ಮಾಡೋದೇ ಪಕ್ಷದ ವಿಶೇಷತೆ. ಒಗ್ಗಟ್ಟಾಗಿ ಕೆಲಸ ಮಾಡಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಾವುಟ ಗದಗನಲ್ಲಿ ಹಾರಿಸ್ತೇವೆ ಎಂದರು.