ಗದಗ: ನಗರದ ಹೃದಯ ಭಾಗದಲ್ಲಿನ ನವೀಕೃತ ಬಸ್ ನಿಲ್ದಾಣದ ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಹಿನ್ನೆಲೆ ಜನತೆ ಇಂದು ಸಿಡಿದೆದ್ದು ಪ್ರತಿಭಟನೆಗಿಳಿದಿದ್ದರು.
ಸಾರ್ವಜನಿಕರ ಉಪಯೋಗಕ್ಕಾಗಿ ನವೀಕೃತಗೊಳಿಸಲಾದ ನಿಲ್ದಾಣ ಕೆಲ ವರ್ಷಗಳಿಂದ ಹಾಗೆಯೇ ಇದೆ. ಈ ನಡುವೆ ಉದ್ಘಾಟನೆಗೆ ಜನಪ್ರತಿನಿಧಿಗಳು ಹಿಂದುಮುಂದು ನೋಡುತ್ತಿದ್ದು, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ರಾಜಕೀಯ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿರು.
ಆದಷ್ಟು ಶೀಘ್ರವಾಗಿ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಬೇಕು ಎಂದು ಆಗ್ರಹಿಸಿ ನಾಗರಿಕರು, ರಸ್ತೆ ತಡೆ ನಡೆಸಿದರು. ಸುಮಾರು ಮೂರು ಗಂಟೆಗೂ ಅಧಿಕ ಕಾಲ ರಸ್ತೆ ತಡೆದು ಅಲ್ಲಿಯೇ ಧರಣಿ ನಡೆಸಿದರು.
ಬಸ್ ನಿಲ್ದಾಣ ಉದ್ಘಾಟನೆಯಾಗದಿದ್ದರಿಂದ ನೂರಾರು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಮುಕ್ತಿ ನೀಡುವಂತೆ ಆಗ್ರಹಿಸಿದರು. ಈ ವೇಳೆ ಮನವಿ ಸ್ವೀಕರಿಸಲು ಸ್ಥಳಕ್ಕಾಗಮಿಸಿದ ಕಾರ್ಯಪಾಲಕ ಇಂಜಿನಿಯರ್ಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ತಕ್ಷಣವೇ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿರುವಂತೆ ಪಟ್ಟು ಹಿಡಿದರು.
ಎಇಇ ಇಂಗಳಳ್ಳಿ ವಿರುದ್ಧ ಕಿಡಿಕಾರಿದ ಸ್ಥಳೀಯರು, ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸುವಂತೆ ಆಗ್ರಹಿಸಿದರು. ಬಳಿಕ ಈ ತಿಂಗಳ 26ರ ಒಳಗೆ ಬಸ್ ನಿಲ್ದಾಣ ಉದ್ಘಾಟನೆಯಾಗದಿದ್ದರೆ, ಸಾರ್ವಜನಿಕರೇ ಸೇರಿ ಉದ್ಘಾಟನೆ ನೆರವೇರಿಸುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ರೈತನ ಜೋಳದ ಬೆಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು