ಗದಗ : ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಸಣ್ಣ ಭಯ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಖರ್ಗೆ ಸೋಲಿಸಲು ಒಳಒಪ್ಪಂದ ಮಾಡಿದ್ದರು : ಜಿಲ್ಲೆಯ ರೋಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಗೆ ಆಗಮಿಸಿದ್ದ ಕಟೀಲ್, ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದರು. ಕಾಂಗ್ರೆಸ್ ನಲ್ಲಿ ಮೂರನೇ ಶಕ್ತಿ ಕೇಂದ್ರದ ಆರಂಭವಾಗುತ್ತಿದೆ. ಆ ಭಯ ಸಿದ್ದು, ಡಿಕೆಶಿ ಅವರನ್ನು ಕಾಡುತ್ತಿದೆ. ಸಿದ್ದರಾಮಯ್ಯ ಅವರು ಖರ್ಗೆಯವರಿಗೆ ದೋಖಾ ಮಾಡಿದರು. ಸಿಎಂ ಸ್ಥಾನಕ್ಕೆ ಏರಲಿಕ್ಕೆ ಬಿಡಲಿಲ್ಲ, ದಲಿತ ಮುಖ್ಯಮಂತ್ರಿ ಆಗಲು ಅಡ್ಡಗಾಲು ಹಾಕಿದರು. ಖರ್ಗೆ ಸೋಲಿಸಲು ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡಿದರು. ಈಗ ಅವರು ಅಧ್ಯಕ್ಷರಾದರೆ ಸಿದ್ದರಾಮಯ್ಯಗೆ ಸೀಟ್ ಸಿಗುವುದು ಕಷ್ಟ ಎಂದು ಹೇಳಿದರು.
ಸಿದ್ದರಾಮಯ್ಯರಿಂದ ಆಧಾರರಹಿತ ಆರೋಪ : 40 ಪರ್ಸೆಂಟ್ ಆರೋಪ ಆಧಾರ ರಹಿತ ಆರೋಪ. ಸಿದ್ದರಾಮಯ್ಯ ಅವರು ನ್ಯಾಯವಾದಿಗಳಾಗಿದ್ದವರು. ಪುರಾವೆ ಇಲ್ಲದೇ ಆರೋಪ ಮಾಡಬಾರದು. ಸಿದ್ದರಾಮಯ್ಯ ಅವರ ಕಾಲದ ಅರ್ಕಾವತಿ ಪುರಾವೆಗಳು ನಮ್ಮ ಬಳಿ ಇವೆ. ಬೆಡ್ ಶೀಟ್ ಹಗರಣ, ಮೊಟ್ಟೆ ಹಗರಣಗಳ ದಾಖಲೆಗಳಿವೆ. ದಾಖಲೆ ಇಟ್ಟು ಮಾತಾಡ್ತೇವೆ.
ಭ್ರಷ್ಟಾಚಾರದ ಮೂಲ ಕೇಂದ್ರ ಕಾಂಗ್ರೆಸ್. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಅವರ ಎಲ್ಲ ನಾಯಕರು ಬೇಲ್ ಮೇಲೆ ಹೊರಗಿದ್ದಾರೆ. ಎಲ್ಲಾ ಜೈಲ್ ಗೆ ಹೋಗುವವರು ಎಂದು ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಭಾರತ ಜೋಡೋ ಯಾತ್ರೆಯ ನಕಲು ಸಂಕಲ್ಪಯಾತ್ರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾತ್ರೆಗಳನ್ನು ಆರಂಭ ಮಾಡಿದ್ದು ನಾವು. ರಥಯಾತ್ರೆ, ಪಾದ ಯಾತ್ರೆ ಮಾಡಿದ್ದು ನಾವು. ಕಳೆದ 60 ವರ್ಷದಿಂದ ಅಧಿಕಾರದಲ್ಲಿ ಇದ್ದವರು ಅವರು. ಯಾತ್ರೆ ಮಾಡುವ ಅವಕಾಶ ಇರಲಿಲ್ಲವಾ. ಜನ ತಿರಸ್ಕಾರ ಮಾಡಿದ್ದಾರೆ. ಅದಕ್ಕೆ ಈಗ ಅವರ ಯಾತ್ರೆ ಆರಂಭವಾಗಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ತಿರುಕನ ಕನಸನ್ನು ಕಾಣುತ್ತಿದ್ದಾರೆ : ನಾವು ಚುನಾವಣೆ ಪೂರ್ವ ತಯಾರಿ ಮಾಡಿಕೊಂಡು ಸರ್ಕಾರದ ಅಭಿವೃದ್ಧಿ ಕೆಲಸವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅವರು ಕಳೆದ 10 ವರ್ಷದಿಂದ ಪಾದಯಾತ್ರೆ ಮಾಡಬಹುದಿತ್ತು. ಯಾಕೆ ಜ್ಯೋತಿಷಿಗಳು ಹೇಳಲಿಲ್ಲವಾ ಅಂತಾ ಲೇವಡಿ ಮಾಡಿದರು. ಸಿದ್ದರಾಮಯ್ಯ ತಿರುಕನ ಕನಸನ್ನು ಕಾಣುತ್ತಿದ್ದಾರೆ. ರಾಹುಲ್ ಗಾಂಧಿಯವರು ಬಂದಿದ್ದಾರೆ ಎಂದು ಸಿದ್ದು ಮತ್ತು ಡಿಕೆಶಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಣ್ಣ, ಡಿಕೆಶಿ ಇಬ್ಬರನ್ನು ಜೋಡಿಸುವ ಯಾತ್ರೆ : ಸಿದ್ದರಾಮಯ್ಯ, ಡಿಕೆಶಿ ಅವರ ಮಧ್ಯೆ ಎಲ್ಲವೂ ಸರಿ ಇಲ್ಲ.ಇಬ್ಬರು ಒಂದೆಡೆ ಸೇರಲ್ಲ. ಯಾತ್ರೆ ಮೂಲಕ ಅವರನ್ನು ಒಂದೆಡೆ ಸೇರಿಸುತ್ತಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಹಿಂದಿನ ಕ್ಷೇತ್ರ ಕಳೆದುಕೊಂಡಿದ್ದಾರೆ. ವರುಣಾ ಕ್ಷೇತ್ರಕ್ಕೆ ಹೋಗುವಂತಿಲ್ಲ. ಬದಾಮಿಯಲ್ಲಿ ಓಡಿಸಿದ್ದಾರೆ. ಕೋಲಾರದಲ್ಲಿ ಜನ ಬೇಡ ಅಂದರು. ಮುಂದಕ್ಕೆ ಕ್ಷೇತ್ರಗಳಿಲ್ಲ. ಹೀಗಾಗಿ ರಾಹುಲ್ ಗಾಂಧಿ ಜೊತೆ ಕ್ಷೇತ್ರ ಹುಡುಕುವ ಯಾತ್ರೆ ಮಾಡುತ್ತಿದ್ದಾರೆ ಎಂದು ಭಾರತ್ ಜೋಡೋ ಯಾತ್ರೆ ಹಾಗೂ ಸಿದ್ಧರಾಮಯ್ಯ ಅವರನ್ನು ಲೇವಡಿ ಮಾಡಿದರು.
ಇದನ್ನೂ ಓದಿ : ಸುಪ್ರೀಂಕೋರ್ಟ್ನಿಂದ ನಾಳೆಯೇ ಹಿಜಾಬ್ ತೀರ್ಪು ಪ್ರಕಟ ಸಾಧ್ಯತೆ!