ಗದಗ : ಹಲವು ಗೊಂದಲಗಳ ನಡುವೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಮತ್ತು ಬನ್ನಿಕೊಪ್ಪ ಗ್ರಾಮದ ಕೆರೆ ತುಂಬಿಸುವ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ಇಂದು ನಡೆದಿದೆ.
ಆ.23ರಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಈ ಎರಡು ಗ್ರಾಮದ ಕೆರೆಗಳ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಸ್ಥಳೀಯ ಶಾಸಕ, ಸಚಿವರು ಗೈರಾಗಿದ್ದರು. ಈ ಘಟನೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಮಾರು 24 ಕೋಟಿ ರೂ. ಬಿಡುಗಡೆ ಮಾಡಿ ಸುಗನಳ್ಳಿ ಆಲದಮ್ಮನ ಮತ್ತು ಬೇವಿನಕೊಪ್ಪ ಕೆರೆಗಳ ಅಭಿವೃದ್ಧಿಗೆ ಕುಮಾರಸ್ವಾಮಿ ಅನುದಾನ ಬಿಡುಗಡೆಗೊಳಿಸಿದ್ದರು.
ಹೀಗಾಗಿ, ಭೂಮಿ ಪೂಜೆ ಕಾರ್ಯಕ್ಕೆ ಆಗಮಿಸಿದ್ದರು. ಆದರೆ, ಕೆರೆ ಕಾಮಗಾರಿಯ ಭೂಮಿ ಪೂಜೆಗೆ ಆಹ್ವಾನ ಮಾಡಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಬರದೆ ಎಸ್ಕೇಪ್ ಆಗಿದ್ದರು.
ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಇರದೆ ಕುಮಾರಸ್ವಾಮಿಗೆ ಭೂಮಿ ಪೂಜೆ ನೆರವೇರಿಸಲು ಆಗಿರಲಿಲ್ಲ. ಇದರಿಂದ ಬೇಸರಗೊಂಡು ಸಚಿವರು ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ, ಇಂದು ಕೆರೆ ತುಂಬಿಸುವ ಕಾರ್ಯಕ್ಕೆ ಅಧಿಕೃತವಾಗಿ ಭೂಮಿ ಪೂಜೆ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮತ್ತು ಗದಗ-ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿಯವರ ಬಗೆಗೆ ಯಾವ ನಾಯಕರು ತುಟಿ ಬಿಚ್ಚಲಿಲ್ಲ.
ಓದಿ: ಕರ್ನಾಟಕ ಕೋವಿಡ್ ವರದಿ : ರಾಜ್ಯದಲ್ಲಿ ಇಂದು 967 ಮಂದಿಗೆ ಕೋವಿಡ್, 10 ಸೋಂಕಿತರ ಸಾವು