ಗದಗ: ಮದುವೆಯಾಗಿ 5 ವರ್ಷದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ನಿವೇದಿತಾ ಕನ್ವಳಿ (23) ಎಂಬ ಬಾಣಂತಿ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ಲಕ್ಷ್ಮೇಶ್ವರ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಯಾಗಿರುವ ನಿವೇದಿತಾ, ಜ್ಯೋತಿ ಹೆರಿಗೆ ಆಸ್ಪತ್ರೆಯಲ್ಲಿ ಆಪರೇಷನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಹೆರಿಗೆ ಯಾದ ನಂತರ ನಿವೇದಿತಾ ನಿನ್ನೆಯಿಂದ ಇಂದು ಮಧ್ಯಾಹ್ನದ ವರೆಗೂ ಆರೋಗ್ಯವಾಗಿದ್ದರು. ಆದರೆ ಮಧ್ಯಾಹ್ನದ ನಂತರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಕೆಯನ್ನು ಉಳಿಸಿಕೊಳ್ಳುವಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ, ಮೊದಲೆ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಿದ್ದರೆ ಹೋಗುತ್ತಿದ್ದೆವು. ಎಂದು ಮೃತ ಬಾಣಂತಿ ಸಹೋದರ ಆರೋಪಿಸಿದ್ದಾನೆ.
ಮದುವೆಯಾಗಿ ಐದು ವರ್ಷದ ಬಳಿಕ ನಿವೇದಿತಾಗೆ ಮಗುವಾಗಿತ್ತು. ಸಂತಸ ದಲ್ಲಿದ್ದ ಕುಟುಂಬಸ್ಥರಿಗೆ ಮಗಳ ಸಾವಿನ ಸುದ್ದಿ ಸಿಡಿಲು ಬಡಿದಂತಾಗಿದೆ. ಬಾಣಂತಿ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಮುಂದೆ ಜನಜಂಗುಳಿ ಸೇರಿತ್ತು. ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕುಟುಂಬಸ್ಥರು ಮೃತದೇಹ ತೆಗೆದುಕೊಂಡು ತಮ್ಮ ಗ್ರಾಮಕ್ಕೆ ತೆರಳಿದ್ದಾರೆ.