ಗದಗ: ರೈತ ಕುಟುಂಬವೊಂದರ ಬಾಳೆ ತೋಟವನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ವಡವಿ ಹೊಸೂರಿನ ಹಾಲೇಶ್ ಘಟರೆಡ್ಡಿಹಾಳ ಎಂಬ ಯುವ ರೈತ 2.5 ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬಾಳೆಯನ್ನು ಬೆಳೆದಿದ್ದರು. ಇದೇ ಮೊದಲ ಬಾರಿಗೆ ಬಾಳೆ ಹಾಕಿ ಕೃಷಿ ಜೀವನ ಆರಂಭಿಸಿದ್ದರು. ಆದರೆ, ಯಾರೋ ದುಷ್ಕರ್ಮಿಗಳು ರಾತ್ರೋ ರಾತ್ರಿ ಬಾಳೆ ಬೆಳೆ ಜೊತೆಗೆ 2 ಲಕ್ಷ ಮೌಲ್ಯದ ಎರಡು ಬೋರ್ವೆಲ್ ಗಳನ್ನೂ ನಾಶಪಡಿಸಿದ್ದಾರೆ.
'ಎರಡೂವರೆ ಎಕರೆಯಲ್ಲಿ ಬಾಳೆ ಗಿಡವನ್ನು ಬೆಳೆಸಿದ್ದೆವು. ಅದರಲ್ಲಿ 2 ಎಕರೆಯನ್ನು ಕಡಿದು ನಾಶ ಮಾಡಿದ್ದಾರೆ. ಅಲ್ಲದೇ, ಎರಡು ಬೋರ್ವೆಲ್ಗಳಲ್ಲಿ ಒಂದರ ಮೇಲೆ ಕಲ್ಲನ್ನು ಎತ್ತಿ ಹಾಕಿದ್ದಾರೆ, ಇನ್ನೊಂದರ ಕೇಸಿಂಗ್ ವೈರ್ ಕಟ್ ಮಾಡಿ ಮೋಟಾರ್ ಅನ್ನು ನೀರಿಗೆ ಬಿಟ್ಟಿದ್ದಾರೆ. ಬಾಳೆಗೆ ಒಂದು ಎಕರೆಗೆ ಒಂದು ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೆವು. ಬೆಳೆಗೆ ಒಟ್ಟು ಎರಡೂವರೆ ಲಕ್ಷ ಖರ್ಚಾಗಿದೆ.
ಬೋರ್ವೆಲ್ ಹಾಗೂ ಗೊಬ್ಬರ ಅಂತ ಸೇರಿ ಸರಿಸುಮಾರು 5 ಲಕ್ಷದವರೆಗೆ ಖರ್ಚಾಗಿದೆ. ಉಳಿದಿರುವ ಅರ್ಧ ಎಕರೆಯನ್ನು ಉಳಿಸಿಕೊಳ್ಳಬೇಕಾದ್ರೆ ನೀರು ಬೇಕೇ ಬೇಕು. ಇತ್ತ ಮಳೆಯೂ ಇಲ್ಲ' ಎಂದು ಜಮೀನಿನ ಮಾಲೀಕ ಹಾಲೇಶ್ ಘಟರೆಡ್ಡಿಹಾಳ ಅಳಲನ್ನು ತೋಡಿಕೊಂಡಿದ್ದಾರೆ.
ಸಾಲ ತೀರಿಸಿ ತಮ್ಮನ ಮದುವೆ ಮಾಡುವ ಆಸೆ ಹೊಂದಿದ್ದ ಹಾಲೇಶ್
ಹಾಲೇಶ್ ಮತ್ತು ಆತನ ಸಹೋದರ ಇಬ್ಬರು ಮಂಗಳೂರಿನಲ್ಲಿ ಸುಮಾರು 6 ವರ್ಷಗಳ ಕಾಲ ಕೂಲಿ ಅರಸಿ ವಲಸೆ ಹೋಗಿದ್ದರು. ಅಲ್ಲಿ ಹಗಲು ರಾತ್ರಿ ಎನ್ನದೆ ದುಡಿದು ಕೂಡಿಟ್ಟ ಹಣದಿಂದಲೇ ಕಲ್ಲು, ಮುಳ್ಳುಗಳಿಂದ ಕೂಡಿದ್ದ ಜಮೀನನ್ನು ದುರಸ್ಥಿಗೊಳಿಸಿ ಎರಡು ಬೋರ್ವೆಲ್ಗಳನ್ನು ಕೊರೆಯಿಸಿ ಬಾಳೆ ಬೆಳೆದಿದ್ದರು. ಬ್ಯಾಂಕ್ ಹಾಗು ಕೈ ಸಾಲ ಎಂದು ಸುಮಾರು 6 ಲಕ್ಷ ರೂ.ವರೆಗೆ ಸಾಲ ಮಾಡಿಕೊಂಡಿದ್ದರು. ಹೀಗಾಗಿ, ಬಾಳೆ ಚೆನ್ನಾಗಿ ಬೆಳೆದರೆ ಕೈ ತುಂಬ ಹಣ ಮಾಡಬಹುದು, ಸಾಲವನ್ನು ತೀರಿಸಿ ತಮ್ಮನ ಮದುವೆ ಮಾಡಬಹುದು ಅಂತ ಹಾಲೇಶ್ ಅಂದುಕೊಂಡಿದ್ದ.
ಇನ್ನು ಮುಂದೆ ಯಾವುದೇ ಊರಿಗೆ ದುಡಿಯಲು ಗುಳೇ ಹೋಗುವುದು ಬೇಡ. ವೃದ್ಧ ತಂದೆ ತಾಯಿ ಊರಲ್ಲಿಯೇ ಇದ್ದು ಜೋಪಾನ ಮಾಡಿಕೊಂಡು ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳೋಣ ಅಂತ ಅಂದುಕೊಂಡಿದ್ರು. ಆದರೆ, ಈಗ ಅವೆಲ್ಲವೂ ತಲೆಕೆಳಗಾಗಿದೆ. ಹಾಗಾಗಿ, ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು. ಈ ಕೃತ್ಯ ಎಸಗಿರೋ ದುಷ್ಕರ್ಮಿಗಳ ಮೇಲೆ ಕ್ರಮ ಆಗಬೇಕು ಅಂತ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗುವ ವೇಳೆ ಆ್ಯಂಬುಲೆನ್ಸ್ನಲ್ಲೇ ಹೆರಿಗೆ, ತಾಯಿ-ಮಗು ಸುರಕ್ಷಿತ