ಗದಗ: ಆಯುಷ್ ಇಲಾಖೆ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಹೆಚ್ಒ) ಬಾಯಿಗೆ ಬಂದಂತೆ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಇಬ್ಬರು ಇಲಾಖೆ ಸಿಬ್ಬಂದಿ ರಾಜ್ಯಪಾಲರ ಬಳಿ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಒಬ್ಬರು ಈ ನಾಯಿಯನ್ನು ಹೊರಗಡೆ ಹಾಕಿ ಅಂತಾರೆ. ಡಿಹೆಚ್ಒ ಬಳಿ ಹೋದರೆ ನೀವೇ ಸಾಯ್ತೀರಾ ಇಲ್ಲಾ, ನಾನು ಚುಚ್ಚಿ ಸಾಯಿಸ್ಲಾ ಅಂತಾರೆ. ಚಿತ್ರದುರ್ಗದಿಂದ ರೌಡಿಗಳನ್ನು ಕರೆಸಿ ನಿಮ್ಮ ಕೈ ಕಾಲು ಮುರಿದು ಹಾಕ್ತೀನಿ ಎಂದೆಲ್ಲಾ ನಿಂದಿಸುತ್ತಿದ್ದಾರೆ ಎಂದು ಆಯುಷ್ ಇಲಾಖೆ ಅಧಿಕಾರಿಗಳ ವಿರುದ್ಧ ಇಲಾಖೆಯ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.
ಬೆಟಗೇರಿ ಆಯುಷ್ ಆಸ್ಪತ್ರೆಯಲ್ಲಿ ಕ್ಷಾರ ಸೂತ್ರ ಸಹಾಯಕಿಯಾಗಿ ಕೆಲಸ ಮಾಡ್ತಿರುವ ಪಾರ್ವತಿ ಹುಬ್ಬಳ್ಳಿ ಮತ್ತು ಸ್ತ್ರೀರೋಗ ಸಹಾಯಕಿಯಾಗಿರುವ ನಂದಾ ಖಟವಟೆ ತಮ್ಮ ಸಮಸ್ಯೆಗಳನ್ನು ಮಾಧ್ಯಮದ ಮುಂದೆ ವಿವರಿಸಿದರು.
ಆಯುಷ್ ಇಲಾಖೆ ಅಧಿಕಾರಿ ಡಾ. ಸುಜಾತಾ ಪಾಟೀಲ್ ಸುಮಾರು 8 ತಿಂಗಳಿಂದ ವಿನಾಕಾರಣ ಕೆಲಸಕ್ಕಾಗಿ ಅಲೆದಾಡಿಸುತ್ತಿದ್ದಾರೆ. ಅವರು ನಮ್ಮನ್ನು ಕೆಲಸದಿಂದ ಕೈಬಿಡಬೇಕು ಅಂತ ಹುನ್ನಾರ ನಡೆಸಿದ್ದಾರೆ. 8 ತಿಂಗಳಿಂದ ಸಂಬಳ ನೀಡಿಲ್ಲ, ಸಂಸಾರ ನಡೆಸುವುದು ಕಷ್ಟ ಆಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಸಿಇಒ ಅವರಿಗೂ ಮನವಿ ಮಾಡಿದ್ದೇವೆ, ಅವರೂ ಸಹ ನಮಗೆ ನ್ಯಾಯ ಒದಗಿಸಿಲ್ಲ. ಹೀಗಾದರೆ ನಾವು ಯಾರನ್ನು ಕೇಳಬೇಕು ಅಂತಾ ಕಣ್ಣೀರು ಹಾಕಿದರು.
ಆಯುಷ್ ಅಧಿಕಾರಿ ಸುಜಾತಾ ಅವರಿಗೆ ಮನವಿ ಮಾಡಿ ವಿನಾಕಾರಣ ಕಿರಿಕಿರಿ ಮಾಡಬೇಡಿ ಎಂದು ಬೇಡಿಕೊಂಡರೂ ನಮ್ಮನ್ನು ನಾಯಿ ಅಂತ ಜರೀತಾರೆ, ಅವಾಚ್ಯ ಶಬ್ದಗಳಿಂದ ಅವಮಾನಿಸುತ್ತಾರೆ, ಜೊತೆಗೆ ಡಿಹೆಚ್ಒ ಸತೀಶ್ ಬಸರಿಗಿಡದ ಅವರಿಗೆ ಹೇಳಿದರೆ, ದಯಾಮರಣಕ್ಕೆ ನೀವು ಅರ್ಜಿ ಕೋರಿದ್ದೀರಲ್ಲ, ನೀವೇ ಸಾಯ್ತೀರಾ ಇಲ್ಲ ನಾನೇ ಚುಚ್ಚಿ ಸಾಯಿಸ್ಲ ಅಂತಾರೆ ಎಂದು ಅಳಲು ತೋಡಿಕೊಂಡರು.
ಇದೀಗ ಘಟನೆ ಬಗ್ಗೆ ತಿಳಿದ ಕ್ಷತ್ರೀಯ ಸಮಾಜದ ಮಹಿಳಾ ಸಂಘದ ಸದಸ್ಯರು ಈ ಇಬ್ಬರು ಸಿಬ್ಬಂದಿಯ ಪರವಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.
ಆಯುಷ್ ಅಧಿಕಾರಿ ಹಿಂದೊಮ್ಮೆ ಚಿತ್ರದುರ್ಗದಲ್ಲಿ ವ್ಯಕ್ತಿಯೊಬ್ಬರ ಮೇಲೆ ಬಹಿರಂಗವಾಗಿ ಹಲ್ಲೆ ಮಾಡಿ ಸುದ್ದಿಯಾಗಿದ್ದರು. ಈಗ ಗದಗ ಜಿಲ್ಲೆಯಲ್ಲಿ ತಮ್ಮ ದರ್ಪ ತೋರಿಸ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.