ಗದಗ: 2023ರ ವಿಧಾನಸಭೆ ಚುನಾವಣೆಗೆ ಗದಗ ಜಿಲ್ಲೆ ರೋಣ ಮತ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ (ಆಪ್) ಸಂಘಟನಾತ್ಮಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗಜೇಂದ್ರಗಡ ಪಟ್ಟಣದಲ್ಲಿ ಆಪ್ ಪಕ್ಷದ ಕಾರ್ಯಾಲಯ ಉದ್ಘಾಟನೆಯಲ್ಲಿ ತನ್ನ ಬಲಾಬಲ ತೋರಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.
ರಾಜ್ಯದಲ್ಲಿ ಚುನಾವಣಾ ಸಮೀಪಿಸುತ್ತಿರುವಾಗಲೇ ಗದಗ ಜಿಲ್ಲೆಯಲ್ಲಿ ಈಗಿನಿಂದಲೇ ಚುನಾವಣಾ ಕಾವು ಏರತೊಡಗಿದೆ. ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿಆಮ್ ಆದ್ಮಿ ಪಕ್ಷದ ಪ್ರಚಾರದ ಅಬ್ಬರ ಜೋರಾಗಿತ್ತು. ರೋಣ ಕ್ಷೇತ್ರಕ್ಕೆ ಆಪ್ ಪಕ್ಷಕ್ಕೆ ಆನೇಕಲ್ ದೊಡ್ಡಯ್ಯ ಅಭ್ಯರ್ಥಿಯಾಗಿದ್ದು, ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಟಕ್ಕರ್ ಕೊಡಲು ಗಜೇಂದ್ರಗಡ ಪಟ್ಟಣದಲ್ಲಿ ಬೃಹತ್ ರ‍್ಯಾಲಿ ನಡೆಸಿದರು.
ಪಟ್ಟಣದ ಜಿಟಿಡಿ ಕಲ್ಯಾಣ ಮಂಟಪದಿಂದ ಆರಂಭಗೊಂಡ ಬೃಹತ್ ಮೆರವಣಿಗೆ ಕಾಲಕಾಲೇಶ್ವರ ವೃತ್ತದ ಮೂಲಕ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಆಪ್ ಕಾರ್ಯಾಲಯದವರೆಗೂ ಸಂಚರಿಸಿತು. ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಜನ ಮನ ಸೆಳೆಯಿತು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಪ್ ಕಾರ್ಯಾಲಯ ಉದ್ಘಾಟನೆ ವೇಳೆ ರೋಣ ಕ್ಷೇತ್ರದ ಬಹುತೇಕ ಗ್ರಾಮಗಳಿಂದ ಆಗಮಸಿದ ಆಮ್ ಆದ್ಮಿ ಕಾರ್ಯಕರ್ತರ ತೆಲೆಯ ಮೇಲೆ ಹಾಕಲಾದ ಆಪ್ ಟೋಪಿ ಗಮನ ಸೆಳೆಯಿತು.
ಬಳಿಕ ಮಾತನಾಡಿದ ಆಮ್ ಆದ್ಮಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಆಮ್ ಆದ್ಮಿಯಿಂದ ದೇಶಕ್ಕೆ ಅಭಿವೃದ್ಧಿ ಅಜೆಂಡಾ ಮಾಡಿದ್ದೇವೆ. ಜನ ಪರ್ಯಾಯ ಸರ್ಕಾರ ಬಯಸಿದ್ದಾರೆ. ಪರ್ಸೆಂಟೇಜ್ ಸರ್ಕಾರ ಬೇಕಿಲ್ಲ. ನಾವು ಜೀರೋ ಪರ್ಸೆಂಟ್ ಕಮಿಷನ್ನಲ್ಲಿ ಶೇ. 100ರಷ್ಟು ಕೆಲಸ ಮಾಡುತ್ತೇವೆ. 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಕೈಗೆ ಪೊರಕೆ ತೆಗೆದುಕೊಂಡು ರಾಷ್ಟ್ರೀಯ ಪಕ್ಷಗಳನ್ನು ಗುಡಿಸುವ ಕೆಲಸ ಮಾಡುತ್ತೇವೆ. ದೆಹಲಿ, ಪಂಜಾಬ್ನಂತೆ ಕರ್ನಾಟಕದಲ್ಲೂ ಉಚಿತ ಶಿಕ್ಷಣ, ಆರೋಗ್ಯ, ರೈತರ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಸದ್ಯದಲ್ಲೇ ಕರ್ನಾಟಕದಲ್ಲೂ ಪಕ್ಷದ ಸಾಮರ್ಥ್ಯ ಪ್ರದರ್ಶನ: ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ