ಗದಗ: ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದ್ದು ಪೊಲೀಸರು ಕೂಡಾ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಅನಗತ್ಯವಾಗಿ ಹೊರಗೆ ಸುತ್ತಾಡುವವರಿಗೆ ಆಶಾ ಕಾರ್ಯಕರ್ತೆಯರು ಕೈಯಲ್ಲಿ ಕೋಲು ಹಿಡಿದು ಶಿಕ್ಷೆ ನೀಡುತ್ತಿದ್ದಾರೆ.
ಗದಗ ಜಿಲ್ಲೆಯಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ನಗರದಲ್ಲಿ , ಹೋಬಳಿಗಳಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದರೆ, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಜನರನ್ನು ನಿಯಂತ್ರಿಸುವ ಮೂಲಕ ಪೊಲೀಸರಿಗೆ ಸಾಥ್ ನೀಡಿದ್ದಾರೆ. ವಿನಾ ಕಾರಣ ತಿರುಗುವವರಿಗೆ , ಮಾಸ್ಕ್ ಧರಿಸದೆ ರಸ್ತೆಗೆ ಬರುವವರಿಗೆ ಕೋಲು ಹಿಡಿದು ಬಸ್ಕಿ ಹೊಡೆಸುತ್ತಿದ್ದಾರೆ. ಗದಗ ಜಿಲ್ಲೆಯ ಮಾರನಬಸರಿ ಹಾಗೂ ಜಕ್ಕಲಿ ಗ್ರಾಮದಲ್ಲಿ ಕಂಡು ಬಂದ ದೃಶ್ಯ ಇದು. ಆಶಾ ಕಾರ್ಯಕರ್ತೆಯರು ಕೈಯಲ್ಲಿ ಕೋಲು ಹಿಡಿದು ಗ್ರಾಮವನ್ನು ಕಾಯುತ್ತಿದ್ದಾರೆ. ಎಷ್ಟೇ ಬುದ್ಧಿ ಹೇಳಿದರೂ ಕೇಳದವರಿಗೆ ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ನೀಡುತ್ತಿದ್ದಾರೆ. ರಾಜ್ಯದ ಹಲವು ಕಡೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಾಗಿರುವ ಪ್ರಕರಣ ನಡೆದಿತ್ತು. ಈಗ ಅವರಿಗೆ ಕೋಲು ನೀಡಿರುವುದರಿಂದ ತಮ್ಮ ಮೇಲೆ ಹಲ್ಲೆ ಮಾಡುವವರ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.