ಗದಗ: ಲಾರಿ ಚಾಲಕರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡುತ್ತಿದ್ದ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ನಿವಾಸಿಗಳಾದ ಉಪೇಂದ್ರ ಮೋಡಿಕೇರ, ಲಕ್ಷ್ಮಣ ಮೋಡಿಕೇರ, ದುರಗಪ್ಪ ಮೋಡಿಕೇರ, ಶಿವಾಜಿ ಮೋಡಿಕೇರ ಬಂಧಿತ ಆರೋಪಿಗಳು. ಜೊತೆಗೆ ಇನ್ನೂ ನಾಲ್ಕು ಜನ ಆರೋಪಿಗಳು ಬೊಲೆರೋ ವಾಹನಗಳ ಸಮೇತ ಪರಾರಿಯಾಗಿದ್ದಾರೆ. ಈಗ ಬಂಧನವಾಗಿರುವ ಆರೋಪಿಗಳಿಂದ ಕಬ್ಬಿಣದ ರಾಡ್ಗಳು, ಖಾರದ ಪುಡಿ, ಖಾಲಿ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿಸೆಂಬರ್ 25ರಂದು ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತ ಆರೋಪಿಗಳು ಲಾರಿ ಚಾಲಕರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.