ಗದಗ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 5ಕ್ಕೇರಿದೆ. ಈ ಕುರಿತು ಸರ್ಕಾರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ಸೋಂಕಿತ ವ್ಯಕ್ತಿಯು ಗದಗದ ಗಂಜಿ ಬಸವೇಶ್ವರ ಓಣಿಯ ನಿವಾಸಿ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಈಟಿವಿ ಭಾರತ್ಗೆ ಮಾಹಿತಿ ನೀಡಿದರು. ಸೋಂಕಿತ ವ್ಯಕ್ತಿಗೆ (ರೋಗಿ-514) 75 ವರ್ಷ ವಯಸ್ಸಾಗಿದೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಇವರು, ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿ, ನಿವೃತ್ತಿ ಹೊಂದಿದ್ದಾರೆ.
ಮನೆಯಲ್ಲಿ 9 ಮಂದಿ ವಾಸವಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಅವರ ಪ್ರಥಮ ಸಂಪರ್ಕದಲ್ಲಿದ್ದ 24 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 40 ಮಂದಿ ಗಂಟಲು ದ್ರವ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿದೆ.
ಇದರಲ್ಲಿ 13 ಮಂದಿಯ ವರದಿಗಳು ನೆಗಟಿವ್ ಬಂದಿದೆ. ಗಂಜಿ ಬಸವೇಶ್ವರ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಎಂ.ಜಿ.ಹಿರೇಮಠ ತಿಳಿಸಿದರು.