ಗದಗ: ಜಿಲ್ಲೆಯಲ್ಲಿ ಪಿಎಫ್ಐ ಸಂಘಟನೆ ಫುಲ್ ಆ್ಯಕ್ಟೀವ್ ಆಗಿದ್ದು, ಹುಬ್ಬಳ್ಳಿಯಿಂದ ಗದಗದಲ್ಲಿ ಪಿಎಫ್ಐ ಸಂಘಟನೆ ಆಪರೇಟ್ ಆಗುತ್ತಿತ್ತು ಎನ್ನುವ ಮಾಹಿತಿ ಇದೀಗ ಹೊರಬಿದ್ದಿದೆ. ಈ ಸಂಘಟನೆ ಜೊತೆ ಲಿಂಕ್ನಲ್ಲಿದ್ದ ಇಬ್ಬರು ಯುವಕರನ್ನು ಗದಗ ಶಹರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗದಗದ ರಹೆಮತ್ ನಗರದ ರುಸ್ತುಂ ಗೌಂಡಿ, ಕಾಗದಗಾರ ಓಣಿಯ ಸರ್ಫರಾಜ್ ದಂಡೀನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬೆಟಗೇರಿಯ ಸನಾ ಉಲ್ಲಾ ಶಲವಡಿ ಎಂಬುವವರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸರ್ಫರಾಜ್ ಮೆಕ್ಯಾನಿಕ್ ಆಗಿದ್ದು, ರುಸ್ತುಂ ಪ್ಲಂಬರ್ ಕೆಲಸ ಮಾಡುತ್ತಿದ್ದ. ಜೊತೆಗೆ ಸನಾಉಲ್ಲಾ ಜೆಸಿಬಿ ಕೆಲಸ ಮಾಡುತ್ತಿದ್ದ. ಈ ಮೂವರು ಪಿಎಫ್ಐ ಸಂಘಟನೆ ಜೊತೆ ಗುರುತಿಸಿಕೊಂಡಿದ್ದು, ಜಿಲ್ಲಾದ್ಯಂತ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗ್ತಿದೆ.
ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿ: ಸೆಪ್ಟೆಂಬರ್ 22 ರಂದು ರಾಷ್ಟ್ರಿಯ ತನಿಖಾದಳ ದೇಶಾದ್ಯಂತ ಪಿಎಫ್ಐ ಸಂಘಟನೆ ಕಾರ್ಯಕರ್ತರ ಮನೆ, ಕಚೇರಿ ಮೇಲೆ ದಾಳಿ ನಡೆಸಿತ್ತು. ಈ ದಾಳಿ ಖಂಡಿಸಿ ಹುಬ್ಬಳ್ಳಿ ಕೌಲ್ ಬಜಾರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ವಿವಿಧೆಡೆ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಗದಗದಿಂದ ಜನರನ್ನ ಕರೆದುಕೊಂಡು ಬರಲೆಂದು, ಜನರನ್ನ ಸಂಪರ್ಕಿಸುವ ಕೆಲಸವನ್ನ ಈ ಮೂವರು ಆರೋಪಿಗಳು ಮಾಡಿದ್ರು.
ನಮ್ಮ ಮಗ ಆ ಸಂಘಟನೆ ಜೊತೆ ಇಲ್ಲ: ಈ ಬಗ್ಗೆ ಮಾತನಾಡಿದ ಸರ್ಫರಾಜ್ ತಂದೆ ಅಬ್ದುಲ್ ವಹಾಬ್, ಬೆಳಗ್ಗೆ 7 ಗಂಟೆ ಸುಮಾರಿಗೆ ಕ್ರಿಕೆಟ್ ಆಡುವುದಕ್ಕೆ ಹೊರಗಡೆ ಹೋಗಿದ್ದ ಎಂದುಕೊಂಡಿದ್ದೆವು. ಆದರೆ ಮಾಧ್ಯಮದವರಿಂದಲೇ ಆತ ಅರೆಸ್ಟ್ ಆಗಿರುವ ಬಗ್ಗೆ ನಮಗೆ ತಿಳಿದಿದೆ. ನಮ್ಮ ಮಗ ಪಿಎಫ್ಐ ಸಂಘಟನೆ ಜೊತೆ ಲಿಂಕ್ನಲ್ಲಿಲ್ಲ. ಸಮಾಜಘಾತುಕ ಕೆಲಸದಲ್ಲಿ ನಮ್ಮ ಮಕ್ಕಳು ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಿಎಫ್ಐ ಮುಖಂಡರ ಮನೆಯ ಮೇಲೆ ಎಸ್ಪಿ ನೇತೃತ್ವದಲ್ಲಿ ದಾಳಿ: ಇಬ್ಬರು ವಶಕ್ಕೆ
ಯುವಕರ ಮೇಲೆ ಪೊಲೀಸ್ ಹದ್ದಿನ ಕಣ್ಣು: ಹುಬ್ಬಳ್ಳಿಯಿಂದ ಆಪರೇಟ್ ಆಗ್ತಿರುವ ಸಂಘಟನೆಯನ್ನ ಗದಗದಲ್ಲಿ ಬಲಗೊಳಿಸಲು 25ಕ್ಕೂ ಹೆಚ್ಚು ಯುವಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಅದರಲ್ಲಿ ಪ್ರಮುಖವಾಗಿ ಮೂವರನ್ನ ವಶಕ್ಕೆ ಪಡೆದು, ತನಿಖೆ ನಡೆಸಲಾಗ್ತಿದೆ. ಎರಡು ವರ್ಷದ ಹಿಂದೆ ಸಿಎಎ, ಎನ್ಆರ್ಸಿ ವಿರೋಧಿಸಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಗದಗ ಮೂಲದ ಹುಡುಗರನ್ನು ಕರೆದುಕೊಂಡು ಬರಲಾಗಿತ್ತು. ಗದಗ, ನರಗುಂದಲ್ಲಿ ಆ್ಯಕ್ಟೀವ್ ಆಗಿರುವ ಸಂಘಟನೆಯ ಯುವಕರ ವಿಚಾರಣೆ ನಡೆಯುತ್ತಿದೆ.
ಇಬ್ಬರು ನ್ಯಾಯಾಂಗ ಬಂಧನಕ್ಕೆ: ಸರ್ಫರಾಜ್, ರುಸ್ತುನನ್ನ ಏಳು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ನೀಡುವಂತೆ ತಾಲೂಕು ದಂಡಾಧಿಕಾರಿ ಕಿಶನ್ ಕಲಾಲ್ ಆದೇಶ ಹೊರಡಿಸಿದ್ದಾರೆ. ಸನಾಉಲ್ಲಾ ಎಂಬಾತನ ವಿಚಾರಣೆ ಮುಂದುವರೆದಿದೆ.