ಧಾರವಾಡ: ಕೇಂದ್ರ ಸರ್ಕಾರದ "ಅಗ್ನಿಪಥ" ಯೋಜನೆಯನ್ನು ವಿರೋಧಿಸಿ ಹಲವಾರು ಕಡೆ ಯುವಕರು ಪ್ರತಿಭಟನೆ ಮಾಡಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡಿರುವ ಘಟನೆಗಳು ನಡೆದಿವೆ. ಇಂತಹ ಸಮಯದಲ್ಲಿ ಸಾರ್ವಜನಿಕರು ಪೊಲೀಸರಿಗೆ ಯಾವುದೇ ಕಾನೂನು ಕ್ರಮಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬೇಡಿ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕ ಪಿ. ಕೃಷ್ಣಕಾಂತ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ "ಅಗ್ನಿಪಥ" ಯೋಜನೆಯನ್ನು ವಿರೋಧಿಸಿ ಹಲವಾರು ಯುವಕರು ತಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡದೇ ಅಲ್ಲಲ್ಲಿ ಗಲಾಟೆ ಮಾಡಲು ಗುಂಪು ಸೇರಿ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡುವಂತಹ ಕೃತ್ಯಗಳಲ್ಲಿ ಭಾಗವಹಿಸುತ್ತಿರುವುದು ಕಂಡುಬರುತ್ತಿದೆ.
ಇಂತಹ ಸಂದರ್ಭಗಳಲ್ಲಿ ಪ್ರಕರಣಗಳನ್ನು ದಾಖಲಿಸುವಂತಹ, ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತಹ ಅವಕಾಶವನ್ನು ಪೊಲೀಸರಿಗೆ ನೀಡಬೇಡಿ. ಯಾವುದೇ ಕಾರಣಕ್ಕೂ ಯಾರೇ ಆಗಿರಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಗಲಾಟೆ ಮಾಡುವುದಾಗಲಿ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡುವಂತಹ ಕೃತ್ಯಗಳಲ್ಲಿ ಭಾಗಹಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲಹೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ
ಅಗ್ನಿಪಥ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಯುವಕರಿಗೆ ಗದಗ ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ. ಒಂದು ವೇಳೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗಿಯಾದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಪತ್ರಿಕಾ ಪ್ರಕಟಣೆ ಹೊರಡಿಸಿ ಎಚ್ಚರಿಕೆ ನೀಡಲಾಗಿದೆ.
ಜೊತೆಗೆ ಗದಗ ಜಿಲ್ಲೆಯಿಂದ ಸೈನಿಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಸಂಗ್ರಹಿಸಲಾಗಿದೆ. ವಿವಿಧ ಕೋಚಿಂಗ್ ಸೆಂಟರ್ ಮತ್ತು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡಿದ್ದು, ಯಾರೂ ಸಹ ಅಹಿಂಸಾತ್ಮಕ ಘಟನೆಗಳಿಗೆ ಪ್ರಚೋದನೆ ನೀಡಬಾರದು ಮತ್ತು ಕಾನೂನಿಗೆ ಧಕ್ಕೆ ಉಂಟು ಮಾಡಬಾರದು ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 7 ಜನ ಸಂಶಯಾಸ್ಪದ ಯುವಕರಿಗೆ ಪೊಲೀಸರು ಗ್ರಿಲ್ ಮಾಡಿ ಮರಳಿ ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅಗ್ನಿಪಥ ಯೋಜನೆಗೆ ವಿರೋಧ ಮಾಡಿದ್ದ ಯುವಕರಿಗೆ ತಿಳುವಳಿಕೆ ನೀಡಲಾಗಿದೆ. ಈ ಸಂಬಂಧ ನಗರದಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು. ನಗರ ಠಾಣೆಯಿಂದ ಮುಳಗುಂದ ನಾಕಾ, ಮಹೇಂದ್ರಕರ ಸರ್ಕಲ್, ಟಾಂಗಾ ಕೂಟ ಗಾಂಧಿ ಸರ್ಕಲ್ ಮತ್ತು ರೈಲ್ವೆ ಸ್ಟೇಷನ್ ವರೆಗೆ ಪೊಲೀಸ್ ಪಥಸಂಚಲನ ನಡೆಸಿ ಅಗ್ನಿಪಥ ಯೋಜನೆ ಬಗ್ಗೆ ತಿಳುವಳಿಕೆ ನೀಡಲಾಯಿತು.
ಬಳ್ಳಾರಿಯಲ್ಲಿ ರೈಲ್ವೆ ಪೊಲೀಸರು ಹೈ ಅಲರ್ಟ್: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತವಾದ ಹಿನ್ನಲೆ ಗಣಿನಾಡು ಬಳ್ಳಾರಿಯಲ್ಲಿ ರೈಲ್ವೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಬಳ್ಳಾರಿ ಹೊಸಪೇಟೆ ಸೇರಿದಂತೆ ಹಲವು ನಿಲ್ದಾಣದಲ್ಲಿ ಪೊಲೀಸರ ಪರೇಡ್ ನಡೆಸಿ, ಜಾಗೃತಿ ಜೊತೆಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
ಓದಿ: ಅಗ್ನಿಪಥ್ ಹಿಂಸಾಚಾರದ ಹಿಂದೆ ಯಾರಿದ್ದಾರೆಂಬುದು ಗೊತ್ತಿದೆ: ಸಚಿವ ಕಾರಜೋಳ