ಗದಗ: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಆದಿತ್ಯ ಅಡಿಗ ಐಸಿಎಐ ಸಂಸ್ಥೆಯವರು ನಡೆಸುವ ಸಿಎ ಅಂತಿಮ ಪರೀಕ್ಷೆಯಲ್ಲಿ ಭಾರತಕ್ಕೆ ಹತ್ತನೇ ಸ್ಥಾನ ಪಡೆದಿದ್ದಾರೆ.
ಅಷ್ಟೇ ಅಲ್ಲದೆ ಸಿಎ ಆನಂದ್ ಪೋತ್ನಿಸ್ ಅವರ ಮಾರ್ಗದರ್ಶನದಲ್ಲಿ ಕು. ರಕ್ಷಿತಾ ಜೈನ್, ಕು. ಪೂಜಾಕಾಟೆ ಗಾರ್ ಅವರು ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದು ರಾಜ್ಯಕ್ಕೆ, ಜಿಲ್ಲೆಗೆ ಹಾಗೂ ಆದರ್ಶ ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.
ಕುಮಾರ್ ಆದಿತ್ಯ ಅಡಿಗ 2013 -14 ನೇ ಸಾಲಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದ್ದು, ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದರು.
ಸಂಸ್ಥೆಯ ನಿವೃತ್ತ ಪ್ರಾಚಾರ್ಯರು, ಮಾಜಿ ಅಧ್ಯಕ್ಷರಾದ ಜೆ.ಎಸ್. ಕೊರ್ಲಹಳ್ಳಿ ಅವರು ಮಾತನಾಡಿ, ನಿಮ್ಮ ಈ ಜ್ಞಾನದೊಂದಿಗೆ ಮಾತನಾಡುವ ಕಲೆಯನ್ನು ಸಹ ಬೆಳೆಸಿಕೊಳ್ಳಬೇಕು. ಈ ಸಾಧನೆ ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ. ನಿಮ್ಮ ಈ ಸಾಧನೆ ಸಂಸ್ಥೆಗೆ ಮತ್ತೊಂದು ಗರಿ ಬಂದಂತಾಗಿದೆ. ಅಷ್ಟೇ ಅಲ್ಲದೆ, ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಸದ್ಯ ಸಂಸ್ಥೆಯ ಚೇರ್ಮನ್ ಸಿಎ ಆನಂದ ಪೋತ್ನಿಸ್ ಅವರು ಮೊದಲ ಚಾರ್ಟೆಡ್ ಅಕೌಂಟೆಂಟ್ ಆಗಿ ಹೊರಹೊಮ್ಮಿದವರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: ಈ ಗ್ರಾಮ ಪಂಚಾಯತ್ನಲ್ಲಿ ಪತಿ ಜವಾನ, ಪತ್ನಿಯೇ ಅಧ್ಯಕ್ಷೆ: ಹೇಗಿದೆ ವಾತಾವರಣ?
ಭಾರತ ಸರ್ಕಾರ ನಡೆಸುವ ಐಸಿಎಐ ಸಂಸ್ಥೆಯ ಸಿ ಎ ಅಂತಿಮ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಈ ವಿದ್ಯಾರ್ಥಿಗೆ ಆದರ್ಶ ಶಿಕ್ಷಣ ಸಂಸ್ಥೆಯಿಂದ ಸನ್ಮಾನ ಮಾಡಲಾಯಿತು.