ಗದಗ: ದೇಶದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿರುವುದು ಗೊತ್ತಿರುವ ಸಂಗತಿ. ಅದರಲ್ಲೂ ಅಡುಗೆ ಎಣ್ಣೆ ಅಂತೂ ಆಕಾಶಕ್ಕೆ ಮುಟ್ಟಿದೆ. ಈ ಕಾರಣಕ್ಕೇನೋ ಪಾಪ ಓರ್ವ ಮಹಿಳೆ ಕಿರಾಣಿ ಅಂಗಡಿಯೊಂದರಲ್ಲಿ ಅಡುಗೆ ಎಣ್ಣೆಯ ಕ್ಯಾನ್ ಕಳ್ಳತನ ಮಾಡಿದ್ದಾಳೆ.
ಮಹಿಳೆ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಬಸ್ ನಿಲ್ದಾಣದ ಪಕ್ಕವಿರುವ ಮಹದೇವ್ ಕಿರಾಣಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಮಹಾದೇವ್ ಕಿರಾಣಿ ಎಂಬ ಅಂಗಡಿಗೆ ಮಹಿಳೆ ಬಂದು ಕಿರಾಣಿ ವಸ್ತುಗಳನ್ನು ಕೊಂಡು ಕೊಳ್ಳುವ ಸೋಗಿನಲ್ಲಿ ಎಣ್ಣೆ ಕ್ಯಾನ್ ಎಗರಿಸಿದ್ದಾಳೆ. ಅಂಗಡಿ ಮಾಲೀಕನನ್ನು ಯಾಮಾರಿಸಿ ಟೇಬಲ್ ಮೇಲಿಟ್ಟಿದ್ದ ಐದು ಕೆಜಿ ತೂಕದ ಅಡುಗೆ ಎಣ್ಣೆಯ ಕ್ಯಾನ್‌ವೊಂದನ್ನು ಕದ್ದು ಕೆಳಗೆ ಇಟ್ಟಿದ್ದಾಳೆ. ಅಲ್ಲದೇ, ಅಂಗಡಿ ಮಾಲೀಕ ಕೆಳಗೆ ನೋಡುತ್ತಿದ್ದಂತೆ ಅಡುಗೆ ಎಣ್ಣೆಯ ಕ್ಯಾನನ್ನು ಇನ್ನೋರ್ವ ವ್ಯಕ್ತಿಯಿಂದ ಬೇರೆಡೆ ಸಾಗಿಸಿ ಸದ್ಯ ಸಿಕ್ಕಿ ಹಾಕಿಕೊಂಡಿದ್ದಾಳೆ.