ಗದಗ: ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೊಬ್ಬ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಗರದ ಹಳೆ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದಿದೆ. ಸುನೀಲ್ ಹಾಗೂ ದೇವು ಎಂಬ ಇಬ್ಬರ ನಡುವೆ ಗಲಾಟೆ ನಡೆದಿದೆ. ದೇವು ತನ್ನ ಸ್ನೇಹಿತ ಸುನಿಲ್ಗೆ ಚಾಕುವಿನಿಂದ ಹೊಟ್ಟೆ ಹಾಗು ಕಿವಿಗೆ ಇರಿದಿದ್ದಾನೆ. ಹಣಕಾಸು ಹಾಗೂ ತಾಯಿಯನ್ನು ನಿಂದಿಸಿದ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.
ವಿಷಯ ತಿಳಿದು ಸಂಚಾರಿ ಠಾಣೆ ಹಾಗೂ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳು ಸುನೀಲ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ದೇವನ್ನು ವಶಕ್ಕೆ ಪಡೆದಿದ್ದಾರೆ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿವಿ ರಿಮೋಟ್ಗಾಗಿ ಜಗಳ: ಟಿವಿ ರಿಮೋಟ್ಗಾಗಿ ಮಕ್ಕಳಿಬ್ಬರು ಗಲಾಟೆ ಮಾಡುತ್ತಿದ್ದನ್ನು ಕಂಡು ಕೋಪಗೊಂಡ ತಂದೆ ಕತ್ತರಿ ಎಸೆದಿದ್ದರಿಂದ ಹಿರಿಯ ಮಗ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಚಂದ್ರಶೇಖರ್ (16) ಎಂಬ ಬಾಲಕ ಮೃತಪಟ್ಟಿದ್ದಾನೆ. ಲಕ್ಷ್ಮಣಬಾಬು ಕತ್ತರಿ ಎಸೆದ ತಂದೆ ಎಂದು ತಿಳಿದುಬಂದಿದೆ. ಮಕ್ಕಳಿಬ್ಬರು ರಿಮೋಟ್ಗಾಗಿ ಜಗಳವಾಡಿದ್ದರಿಂದ ಸಿಟ್ಟಿಗೆದ್ದ ಲಕ್ಷ್ಮಣಬಾಬು ಹಿರಿಯ ಮಗನ ಮೇಲೆ ಕತ್ತರಿ ಎಸೆದಿದ್ದರು. ಬಾಲಕನ ಕಿವಿಗೆ ಕತ್ತರಿ ತಗುಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಲಕ್ಷ್ಮಣಬಾಬು ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲಕ್ಷ್ಮಣಬಾಬು ಪಾರ್ಶ್ವವಾಯು ಪೀಡಿತರಾಗಿದ್ದು, ಮನೆಯಲ್ಲೇ ಇರುತ್ತಿದ್ದರು ಎಂದು ತಿಳಿದುಬಂದಿದೆ.