ಗದಗ: ನೀವು ಮನೆ ಕಟ್ಟಿಕೊಳ್ಳಿ, ಆ ಸೈಟ್ ಅನ್ನು ನಿಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವ್ಯಕ್ತಿಯೋರ್ವ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಬರಪ್ಪಜ್ಜ ಬೆನ್ನಮಟ್ಟಿ ಎಂಬ ವ್ಯಕ್ತಿ ತನ್ನ ಜಮೀನಿನಲ್ಲಿ ಎನ್.ಎ. ಸೈಟ್ ಮಾಡಿಸಿ ಕೊಡುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂ. ಪಡೆದು ಪಂಗನಾಮ ಹಾಕಿರುವ ಆರೋಪ ಕೇಳಿಬಂದಿದೆ.
ಬರಮಜ್ಜ ಬೆನ್ನಮಟ್ಟಿಗೆ ಊರ ಬಳಿ ಸುಮಾರು 4 ಎಕರೆ ಜಮೀನು ಇದೆ. ಇದರಲ್ಲಿ ಸುಮಾರು 48 ಜನರಿಗೆ ಎನ್.ಎ. ಸೈಟ್ ಮಾಡಿಕೊಡುತ್ತೀನಿ ಅಂತ ಸುಮಾರು 20 ವರ್ಷಗಳ ಹಿಂದೆಯೇ ಹಣ ಪಡೆದಿದ್ದಾನೆ. ಅದರಂತೆ ಜನರು ಮನೆಯನ್ನು ಸಹ ಕಟ್ಟಿಕೊಂಡು ವಾಸ ಮಾಡ್ತಿದ್ದಾರೆ. ಆದರೆ ಇದೀಗ ಎನ್.ಎ. ಸೈಟ್ ಮಾಡಲು ಅನುಮತಿ ಸಿಕ್ಕಿಲ್ಲ ಅಂತ ಸಬೂಬು ಹೇಳ್ತಿದ್ದಾನೆ. ಜೊತೆಗೆ ಅಲ್ಲಿ ಮನೆ ಕಟ್ಟಿಸಿಕೊಂಡು ವಾಸ ಮಾಡ್ತಿರುವ ಜನರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದ್ದಾನೆ ಎನ್ನಲಾಗಿದೆ.
ಈಗಾಗಲೇ ಈ ಸೈಟ್ ಖರೀದಿ ಮಾಡಿದ ಜನರಿಂದ ಮೂರು ಬಾರಿ ಲಕ್ಷಾಂತರ ರೂ. ದೋಚಿದ್ದಾನೆ. ಒಬ್ಬೊಬ್ಬರು 1.50 ಲಕ್ಷ ಹಣವನ್ನು ಆತನಿಗೆ ನೀಡಿದ್ದು, ಬಾಂಡ್ ಪೇಪರ್ ಸಹ ಮಾಡಿಕೊಂಡಿದ್ದಾರೆ. ಆದರೆ ಈಗ ಜಮೀನು ನನ್ನದು, ನೀವು ಬೇರೆ ಕಡೆ ಹೋಗಿ ಅಂತ ಧಮ್ಕಿ ಹಾಕ್ತಿದ್ದಾನಂತೆ. ಜೊತೆಗೆ ಈ ಜಾಗದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಗ್ರಾಮ ಪಂಚಾಯತಿ ಸಿಬ್ಬಂದಿ ಮುಂದಾದ್ರೆ, ಅದು ನನ್ನ ಜಾಗ, ಅಲ್ಲಿ ಯಾವುದೇ ಕೆಲಸ ಮಾಡುವುದು ಬೇಡ ಅಂತ ತಕರಾರು ತೆಗೆದಿದ್ದಾನಂತೆ.
ಇನ್ನು ಈ ಕುರಿತು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ, ಅನ್ಯಾಯಕ್ಕೊಳಗಾದವರು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಜೊತೆಗೆ ಜಿಲ್ಲಾಡಳಿತ ಸಹ ನಮ್ಮ ಸಹಾಯಕ್ಕೆ ಬರಬೇಕು, ನ್ಯಾಯ ಒದಗಿಸಿಕೊಡಬೇಕು ಅಂತ ಒತ್ತಾಯ ಮಾಡ್ತಿದ್ದಾರೆ.