ಗದಗ : ಪ್ರೀತಿಸಿ ಮದುವೆಯಾದ ಪತ್ನಿಯನ್ನು ಮಾರಕಾಸ್ತ್ರದಿಂದ 23 ಬಾರಿ ಕೊಚ್ಚಿ ಕೊಲೆಗೆ ಯತ್ನಿಸಿದ ಆರೋಪಿಯನ್ನ ಗದಗ ಪೊಲೀಸ್ರು ಹೆಡೆಮುರಿ ಕಟ್ಟಿದ್ದಾರೆ.
ಆಟೋ ಚಾಲಕನಾದ ಇಜಾಜ್ ಶಿರೂರ ಎಂಬಾತ ಬಂಧಿತ ಆರೋಪಿ. ಪತ್ನಿ ಮೇಲೆ ಮಚ್ಚಿನಿಂದ ದಾಳಿ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಪ್ರೇಮ ವಿವಾಹ : ಅಪೂರ್ವಾ ಎಂಬ ಎಂಬಿಎ ಓದುತ್ತಿದ್ದ ಯುವತಿ ಹಾಗೂ ಆಟೋ ಚಾಲಕ ಇಜಾಜ್ ಶಿರೂರ ನಡುವೆ ಪ್ರೀತಿ ಚಿಗುರಿತ್ತು. 2018ರಲ್ಲಿ ಪೋಷಕರ ವಿರೋಧದ ನಡುವೆ ವಿಜಯಪುರದ ದರ್ಗಾವೊಂದರಲ್ಲಿ ಅಪೂರ್ವಾ ಇಜಾಜ್ ಜೊತೆ ಮದುವೆಯಾದಳು. ಅಪೂರ್ವಾ ತನ್ನ ಹೆಸರನ್ನು ಅರ್ಪಾಬಾನು ಇಜಾಜ್ ಶಿರೂರ ಅಂತಾ ಬದಲಾವಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.
ಓದಿ: 4 ವರ್ಷದ ಹಿಂದೆ ಪ್ರೀತಿಸಿ ಮದುವೆ.. ಗದಗದಲ್ಲಿ ಸ್ಕೂಟಿ ಕಲಿಯುತ್ತಿದ್ದ ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ!
ಪತ್ನಿಗೆ ಕಿರುಕುಳ: ಅಪೂರ್ವಾಗೆ ಇಜಾಜ್ ಮೊದಲೇ ಮದುವೆಯಾಗಿರುವ ಸತ್ಯ ಗೊತ್ತಿತ್ತು. ಆದ್ರೂ ಸಹ ಸುಖವಾಗಿಯೇ ಇಬ್ಬರು ಸಂಸಾರ ನಡೆಸುತ್ತಿದ್ದರು. ಆದ್ರೆ, ಇಜಾಜ್ ಮದುವೆಯಾಗಿ ಕೆಲವು ವರ್ಷಗಳ ನಂತರ ಅಪೂರ್ವಳಿಗೆ ಕಿರುಕುಳು ನೀಡಲು ಆರಂಭಿಸಿದ್ದ. ಮಗು ಆದ ಮೇಲೆ ಈ ಕಿರುಕುಳ ಮತ್ತಷ್ಟು ಹೆಚ್ಚಾಯ್ತು.
ವಿಚ್ಛೇದನಕ್ಕೆ ಅರ್ಜಿ : ಕಿರುಕುಳ ಹೆಚ್ಚಾದ ಹಿನ್ನೆಲೆ ಅಪೂರ್ವಾ ಆರೇಳು ತಿಂಗಳ ಹಿಂದೆ ಗಂಡನ ಮನೆ ಬಿಟ್ಟು ಗದಗದಲ್ಲಿರುವ ತನ್ನ ತಾಯಿಯ ಮನೆ ಸೇರಿದ್ದಳು. ಆಗ ಅಪೂರ್ವಾ ಕೋರ್ಟ್ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ಪತಿ ಇಜಾಜ್ ಯಾವುದೇ ಕಾರಣಕ್ಕೂ ವಿಚ್ಛೇದನ ನೀಡುವುದಿಲ್ಲ, ಜೊತೆಗೆ ಇರೋಣ.. ಇಲ್ಲವಾದ್ರೆ ನಿನ್ನ ಕೊಲೆ ಮಾಡುತ್ತೇನೆ ಅಂತಾ ಧಮ್ಕಿ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.
ಡೆಡ್ಲಿ ಅಟ್ಯಾಕ್.. : ಗುರುವಾರ ಗದಗ ನಗರದ ಲಯನ್ ಸ್ಕೂಲ್ ಮೈದಾನದಲ್ಲಿ ಅಪೂರ್ವಾ ತನ್ನ ಮನೆ ಪಕ್ಕದ ಹುಡುಗನೊಂದಿಗೆ ಬೈಕ್ ಕಲಿಯುತ್ತಿದ್ದರು. ಈ ವೇಳೆ ಏಕಾಏಕಿ ಮೈದಾನಕ್ಕೆ ಬಂದ ಆಕೆಯ ಪತಿ ಇಜಾಜ್ ಶಿರೂರು, ಮೃಗೀಯ ರೀತಿಯಲ್ಲಿ ವರ್ತಿಸಿದಲ್ಲದೇ ಮಚ್ಚಿನಿಂದ 23 ಬಾರಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ. ಮಚ್ಚಿನೇಟಿನಿಂದ ನರಳಾಡುತ್ತಿದ್ದ ಆಕೆಯನ್ನು ಸ್ಥಳೀಯರು ಕೂಡಲೇ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು.
ಓದಿ: ಉಕ್ರೇನ್ನಲ್ಲಿ ಜೈವಿಕ ಅಸ್ತ್ರಗಳನ್ನು ಉತ್ಪಾದಿಸುತ್ತಿದ್ದು, ಪುರಾವೆಗಳನ್ನು ನಾಶಪಡಿಸಿದೆ : ರಷ್ಯಾ
ಆರೋಪಿ ಪತಿ ಬಂಧನ : ಆದ್ರೆ, ಕ್ರೂರಿ ಪತಿ ಇಜಾಜ್ ಕೊಲೆಗೆ ಯತ್ನಿಸಿ, ಸ್ಥಳದಿಂದ ನಾಪತ್ತೆಯಾಗಿದ್ದ. ಆರೋಪಿಯನ್ನು ಸೆರೆಹಿಡಿಯಲು ಗದಗ ಪೊಲೀಸರು ಡಿವೈಎಸ್ಪಿ ಶಿವಾನಂದ ಮತ್ತು ಸಿಪಿಐ ಮಹಾಂತೇಶ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದರು. ಹುಬ್ಬಳ್ಳಿಯ ಕೋಲ್ಪೇಟ್ನಲ್ಲಿ ಅಡಗಿದ್ದ ಇಜಾಜ್ನನ್ನು ಕೇವಲ 24 ಗಂಟೆಯೊಳಗೆ ಪೊಲೀಸರು ಬಂಧಿಸಿದರು.
ಜಾತಿ ಮೀರಿ ಪ್ರೀತಿ ಮಾಡಿದ್ದ ಅಪೂರ್ವಾ ಆಸ್ಪತ್ರೆಯಲ್ಲಿ ನರಳಾಟ ನಡೆಸಿದ್ದಾರೆ. ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದ ಪತ್ನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಕಿರಾತಕ ಇಜಾಜ್ ಜೈಲು ಸೇರಿದ್ದಾನೆ. ಪಾಪ ಜಗತ್ತು ಏನು ಅಂತಾ ಅರಿಯದ ಮಗು ಮಾತ್ರ ಅತಂತ್ರವಾಗಿದೆ. ಪ್ರೀತಿ ಪ್ರೇಮ ಅಂತಾ ಮರುಳಾಗಿ ತನ್ನ ಜೀವನವನ್ನು ತಾನೇ ಹಾಳು ಮಾಡಿಕೊಂಡಂತಾಗಿದೆ ಅಪೂರ್ವಾಳ ಬದುಕು.