ಗದಗ: ಪಶುವೈದ್ಯರ ನಿರ್ಲಕ್ಷ್ಯದಿಂದ 50 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ ಎಂದು ಆರೋಪಿಸಿ ಕುರಿಗಾಹಿಗಳು ಸತ್ತ ಕುರಿಗಳನ್ನು ಜಿಲ್ಲಾಡಳಿತ ಕಚೇರಿ ಎದುರು ತಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಕಳಸಾಪೂರ ಗ್ರಾಮದ ಈರಪ್ಪ ಕನ್ಯಾಳ ಎಂಬ ರೈತನಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಉಪ್ಪು ನೀರು ಸೇವಿಸಿ ಈ ಕುರಿಗಳು ಅನಾರೋಗ್ಯದಿಂದ ಬಳಲುತ್ತಿದ್ದವು. ಬಳಿಕ ಅವುಗಳನ್ನು ಪಶುವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಅವರ ನಿರ್ಲಕ್ಷ್ಯದಿಂದ ಕುರಿಗಳು ಸಾವನ್ನಪ್ಪಿವೆ ಎಂದು ರೈತನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಮೃತ ಕುರಿಗಳನ್ನು ಟ್ರ್ಯಾಕ್ಟರ್ನಲ್ಲಿ ಜಿಲ್ಲಾಡಳಿತ ಭವನಕ್ಕೆ ತೆಗೆದುಕೊಂಡು ಬಂದು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಇದೇ ವೇಳೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಸ್.ಹೊಸಮಠ ಹಾಗೂ ಸಹಾಯಕಿ ಜಯಮ್ಮ ಅವರನ್ನು ತರಾಟೆ ತೆಗೆದುಕೊಂಡ ಘಟನೆಯೂ ನಡೆಯಿತು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ ಕುರಡಗಿ ಆಗಮಿಸಿ ಸತ್ತ ಕುರಿಗಳನ್ನ ವೀಕ್ಷಿಸಿ ರೈತ ಕುಟುಂಬಕ್ಕೆ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ರು.