ಗದಗ: ಲಾಕ್ಡೌನ್ ತಂದಿಟ್ಟ ಸಂಕಷ್ಟಕ್ಕೆ ಕಾರ್ಮಿಕರು, ನಿರಾಶ್ರಿತರು, ಬಡವರು ತೀವ್ರವಾಗಿ ಬಳಲಿ ಹೋಗಿದ್ದಾರೆ. ಕೆಲವರಂತೂ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಗದಗದ ನರೇಗಲ್ ಪಟ್ಟಣದಲ್ಲಿ ಬಾಡಿಗೆ ಪಾವತಿಸಿ ಎಂದು ಮಾಲೀಕರು ನೀಡುತ್ತಿರುವ ವೇದನೆ ತಾಳಲಾರದೆ ಎಷ್ಟೋ ಮಂದಿ ಮನೆ ಬಿಡುತ್ತಿದ್ದಾರೆ.
ನರೇಗಲ್ನಲ್ಲಿ ಸುಮಾರು 150 ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದವು. ಅಲ್ಲಿದ್ದ ಹೆಚ್ಚಿನವರು ಕೂಲಿ ಕಾರ್ಮಿಕರೇ. ಆದರೆ, ಲಾಕ್ಡೌನ್ ಅವರ ಕೈಗಗಳಿಗೆ ಬೀಗ ಹಾಕಿ ಸಂಕಷ್ಟಕ್ಕೆ ದೂಡಿತು. ಹೀಗಾಗಿ, ಅವರಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಡಿಗೆ ಪಾವತಿಸಲು ಸಾಧ್ಯವಾಗದಿದ್ದರೆ, ಮನೆ ಖಾಲಿ ಮಾಡಿ ಎಂದು ಮಾಲೀಕರು ಎಚ್ಚರಿಸಿದ್ದರ ಪರಿಣಾಮ, 150 ಕುಟುಂಬಗಳು ಪಟ್ಟಣ ಹೊರವಲಯದ ಆಶ್ರಯ ಮನೆಗಳಿಗೆ ವಲಸೆ ಹೋಗಿವೆ. ಆದರೆ, ಅಲ್ಲಿರುವ ಆಶ್ರಯ ಮನೆಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ.
ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಮರ್ಪಕ ರಸ್ತೆ ಕೊರತೆಯೂ ಇದೆ. 15 ವರ್ಷಗಳ ಹಿಂದೆ ಈ ಮನೆಗಳನ್ನು ನಿರ್ಮಿಸಲಾಗಿತ್ತು. ಅಂದಿನಿಂದ ಈವರೆಗೂ ಬಳಸಿರಲಿಲ್ಲ. ಹೀಗಾಗಿ ರಸ್ತೆಗಳಲ್ಲಿ, ಗಿಡ-ಗಂಟಿ (ಮುಳ್ಳು ಗಿಡಗಳೂ ಇವೆ) ಬೆಳೆದು ನಿಂತಿವೆ.
ಕೆಲವು ಮನೆಗಳ ಕಿಟಕಿ ಗಾಜು ಹೊಡೆದಿದೆ. ಬಾಗಿಲುಗಳು ದುರಸ್ಥಿಯಾಗಿವೆ. ಅದರಲ್ಲೂ ಹೊಲಗಳಲ್ಲಿ ನಿರ್ಮಿಸಿದ ಪರಿಣಾಮ ಹಾವು, ಚೇಳುಗಳ ಭಯವೂ ಕಾಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೂಲಸೌಕರ್ಯ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ.