ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡದಲ್ಲಿ ಸಿಬಿಐ ತನಿಖೆ ಮುಂದುವರೆದಿದೆ. ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಂತಕರು ಓಡಾಡಿದ್ದ ಸ್ಥಳ ಮತ್ತು ತಂಗಿದ್ದ ಹೋಟೆಲ್‌ಗಳಿಗೆ ಭೇಟಿ ನೀಡಿ, ಹತ್ಯೆಯ ಹಿಂದಿನ ದಿನದ ಹಂತಕರ ಚಲನವಲನದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿವಿಧ ತಂಡಗಳಲ್ಲಿ ತನಿಖೆ ಮಾಡುತ್ತಿರುವ ಸಿಬಿಐ ಅಧಿಕಾರಿಗಳು, ವಿಚಾರಣೆ ನಡೆಸುವ ಸ್ಥಳ ಸಹ ಬದಲಾವಣೆ ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಉಪನಗರ ಪೊಲೀಸ್ ಠಾಣೆಯಿಂದ ಪೊಲೀಸ್ ಅತಿಥಿ ಗೃಹಕ್ಕೆ ವಿಚಾರಣೆ ಶಿಪ್ಟ್ ಆಗಿದೆ. ಧಾರವಾಡದ ಜರ್ಮನ್ ಆಸ್ಪತ್ರೆ ಬಳಿಯ ಪೊಲೀಸ್ ಅತಿಥಿ ಗೃಹದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಕೆಲವರನ್ನು ಕರೆಯಿಸಿ ಸಿಬಿಐ ಅಧಿಕಾರಿಗಳು ಡ್ರಿಲ್ ಆರಂಭಿಸಿದ್ದಾರೆ.
ಯೋಗೀಶ್ಗೌಡ ಕೊಲೆಯ ಸುಪಾರಿಯ ಮೂಲದ ತನಿಖೆ ಪ್ರಯುಕ್ತ, ಕೆಲವರ ವಿಚಾರಣೆ ಹಾಗೂ ಸುಪಾರಿ ಹಣದ ಮೂಲವನ್ನು ಸಿಬಿಐ ಅಧಿಕಾರಿಗಳು ಬೆನ್ನತ್ತಿದ್ದಾರೆ. ಈ ಹಿನ್ನೆಲೆ ಕೆಲವರನ್ನು ಅತಿಥಿ ಗೃಹಕ್ಕೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸ್ ತನಿಖೆಯ ಆರೋಪಿಗಳನ್ನು ಪುನಃ ಕರೆಯಿಸಿ ವಿಚಾರಣೆ ಮಾಡುತ್ತಿದ್ದಾರೆ. ಈಗಾಗಲೇ ಪೊಲೀಸ್ ತನಿಖೆ ಆರೋಪಿ ವಿನಾಯಕ ಕಟಗಿ ಪೊಲೀಸ್ ಅತಿಥಿ ಗೃಹಕ್ಕೆ ಆಗಮಿಸಿದ್ದಾರೆ.