ಹುಬ್ಬಳ್ಳಿ : ಪಾಲಿಕೆಯ ಪೌರಕಾರ್ಮಿಕರಿಗೆ ಪೂರೈಸುತ್ತಿರುವ ಬೆಳಗಿನ ಉಪಹಾರ ಕಳಪೆ ಗುಣಮಟ್ಟ ಹಾಗೂ ಹುಳುಗಳಿಂದ ಕೂಡಿದ್ದು, ಇದನ್ನು ಸೇವಿಸಿ ಪೌರಕಾರ್ಮಿಕರು ಅಸ್ತವ್ಯಸ್ತಗೊಂಡಿರುವ ಆರೋಪ ನಗರದಲ್ಲಿ ನಡೆದಿದೆ.
ನಗರದ ವಲಯ ಕಚೇರಿ 8ರ ವಾರ್ಡ್ ನಂ.56ರಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಇಂದು ಪಾಲಿಕೆಯಿಂದ ಉಪಹಾರ ಒದಗಿಸಿಲಾಗಿತ್ತು. ಅದರಲ್ಲಿ ಹುಳು ಬಂದಿದ್ದು,ಇದನ್ನು ಸೇವಿಸಿದ ಪೌರಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕ ಮತ್ತು ನೌಕರರ ಸಂಘ ಕಳೆದ 2015 ರಿಂದ ಹು-ಧಾ ಮಹಾನಗರ ಪಾಲಿಕೆಯು ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಒದಗಿಸಬೇಕೆಂದು ನಿರಂತರ ಹೋರಾಟದ ಫಲವಾಗಿ 2018ರ ಫೆಬ್ರವರಿಯಲ್ಲಿ ಪಾಲಿಕೆ ಆದೇಶ ಹೊರಡಿಸಿತ್ತು.
ಅದರಂತೆ ಕಳೆದ ಎರಡು ದಿನಗಳಿಂದ ಪೌರಕಾರ್ಮಿಕರಿಗೆ ಕಳಪೆ ಮಟ್ಟದ ಉಪಹಾರ ನೀಡಲಾಗುತ್ತಿದ್ದು, ಪೌರಕಾರ್ಮಿಕರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಲಾಗಿದೆ. ಕೂಡಲೇ ಪಾಲಿಕೆ ಬೆಂಗಳೂರು ಮೂಲದ ಗುತ್ತಿಗೆ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಗುತ್ತಿಗೆ ರದ್ದುಪಡಿಸಬೇಕೆಂದು ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆಗ್ರಹಿಸಿದ್ದಾರೆ.