ಹುಬ್ಬಳ್ಳಿ : ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ವಿತರಿಸಲು ಅವಳಿನಗರದ ವಿವಿಧ ಗೋದಾಮುಗಳಲ್ಲಿದ್ದ ಸುಮಾರು 1000 ಮೆಟ್ರಿಕ್ ಟನ್ ಗೋಧಿಯನ್ನು ಇಂದು ಒಂದೇ ದಿನದಲ್ಲಿ ಶ್ರಮಿಕರು ಸಾಗಣೆ ಮಾಡಿದ್ದಾರೆ.
ಇದು ದಿನವೊಂದರಲ್ಲಿ ಎತ್ತಿದ ಅಧಿಕ ಪ್ರಮಾಣದ ದಾಖಲೆಯಾಗಿದೆ. ಧಾರವಾಡ ಜಿಲ್ಲೆಗೆ 13,720 ಕ್ವಿಂಟಾಲ್ ಅಕ್ಕಿ ಹಂಚಿಕೆಯಾಗಿದ್ದು, ಈಗಾಗಲೇ 10,232 ಕ್ವಿಂಟಲ್ ಅಕ್ಕಿ ಗೋದಾಮಿನಿಂದ ತೆಗೆಯಲಾಗಿದೆ. ಇನ್ನೂ 3,487 ಕ್ವಿಂಟಲ್ ಅಕ್ಕಿ ತೆಗೆಯಬೇಕಾಗಿದೆ. ಹಂಚಿಕೆಯಾಗಿರುವ 1,400 ಮೆಟ್ರಿಕ್ ಟನ್ ಗೋಧಿಯಲ್ಲಿ, ಈಗಾಗಲೇ 1,014 ಮೆಟ್ರಿಕ್ ಟನ್ ಗೋಧಿಯನ್ನು ಇಂದು ಎತ್ತಲಾಗಿದೆ.
ಹುಬ್ಬಳ್ಳಿಯ ಬೊಮ್ಮಾಪುರ, ಉಣಕಲ್ ನ ಭಾರತೀಯ ಆಹಾರ ನಿಗಮದ ಗೋದಾಮುಗಳು, 8 ಸಗಟು ಖರೀದಿದಾರರ ಗೋದಾಮುಗಳು, ಹುಬ್ಬಳ್ಳಿ, ಧಾರವಾಡ, ನವಲಗುಂದ, ಕುಂದಗೋಳ ಹಾಗೂ ಕಲಘಟಗಿಯಲ್ಲಿರುವ ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮದ 07 ಗೋದಾಮುಗಳು ಹಾಗೂ ಹುಬ್ಬಳ್ಳಿಯ ಕೇಂದ್ರೀಯ ಗ್ರಾಹಕರ ಗೋದಾಮು ಸೊಸೈಟಿಯ ಉಗ್ರಾಣಗಳಿಂದ ನಾಲ್ಕು ಸಗಟು ಸಾಗಣೆ ಗುತ್ತಿಗೆದಾರ ಸಂಸ್ಥೆಗಳ 500 ರಿಂದ 600 ಶ್ರಮಿಕ ಹಮಾಲರು ಗೋಧಿ ಸಾಗಣೆ ಮಾಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಾಳೆ ಸಂಜೆಯೊಳಗೆ ಆಹಾರ ಧಾನ್ಯ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ತಲುಪಲಿದೆ.