ಹುಬ್ಬಳ್ಳಿ : ಇಸ್ಲಾಂನಲ್ಲಿ ಹಿಜಾಬ್ ಎಂದರೆ ಪರ್ದಾ ಎಂದರ್ಥ. ಹಿಜಾಬ್ ಧರಿಸದಿದ್ದರೆ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ಎಂದರೆ ಇಸ್ಲಾಂನಲ್ಲಿ 'ಪರ್ದಾ', ಮಹಿಳೆಯರು ತಮ್ಮ ಸೌಂದರ್ಯವನ್ನು ಮರೆಮಾಡಲು ಮುಖವನ್ನು ಮರೆ ಮಾಚಲು ಹಿಜಾಬ್ ಅನ್ನು ಬಳಸುತ್ತಾರೆ. ದೇಶದಲ್ಲಿ ಅತ್ಯಾಚಾರ ಪ್ರಮಾಣ ಏಕೆ ಹೆಚ್ಚಾಗಿದೆ.
ಏಕೆಂದರೆ, ಹೆಣ್ಣು ಮಕ್ಕಳು ಪರದೆಯ ಹಿಂದೆ ಇಲ್ಲ. ಹೀಗಾಗಿ, ಮಹಿಳೆಯರು ತಮ್ಮ ಸೌಂದರ್ಯ ಮರೆಮಾಚಲು ಹಿಜಾಬ್ ಧರಿಸಬೇಕು ಎಂದು ಜಮೀರ್ ಹೇಳಿದ್ದಾರೆ.
ಹಿಜಾಬ್ ಹಾಕುವುದು ಮುಸ್ಲಿಂ ಮಹಿಳೆಯರ ಹಕ್ಕು. ನೂರಾರು ವರ್ಷದಿಂದ ಅವರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಹಿಜಾಬ್ ವಿವಾದ ಆರಂಭವಾದ ವೇಳೆ ಸರ್ಕಾರ ಅದನ್ನು ಸರಳವಾಗಿ ತೆಗೆದುಕೊಂಡಿತ್ತು.
ಹಿಜಾಬ್ ಧಾರಣೆ ಕಡ್ಡಾಯವೇನೂ ಅಲ್ಲ. ಆದರೆ, ಯಾರಿಗೆ ತಮ್ಮ ಸೌಂದರ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಮನಸ್ಸಿರುತ್ತದೋ ಅವರು ಹಿಜಾಬ್ ಧರಿಸುತ್ತಾರೆ ಎಂದರು. ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇಶ ಎಲ್ಲಿಗೆ ಸಾಗುತ್ತಿದೆ.
ಬಿಜೆಪಿಯವರು ಅಧಿಕಾರಕ್ಕಾಗಿ ಯಾರನ್ನಾದರೂ ಬಲಿ ಕೊಡಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ದೇಶದ ಆಸ್ತಿ. ಆದರೆ, ಬಿಜೆಪಿಯವರು ತಮ್ಮ ಲಾಭಕ್ಕಾಗಿ ಮಕ್ಕಳನ್ನು ಬಲಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ದೇಹದಲ್ಲಿ ಜಿನ್ನಾ ಭೂತ ಇದೆ ಎಂಬ ಅಸ್ಸೋಂ ಸಿಎಂ ಟೀಕೆಗೆ ಪ್ರತಿಕ್ರಿಯಿಸಿ, ಈ ಕಾಲದಲ್ಲಿ ಎಲ್ಲರ ಬಗ್ಗೆಯೂ ಎಲ್ಲರೂ ಮಾತನಾಡುತ್ತಾರೆ. ರಾಹುಲ್ ಗಾಂಧಿಯವರ ಬಗ್ಗೆ ದೇಶದ ಜನತೆಗೆ ತಿಳಿದಿದೆ.
ಬಡವರ ಹಿತ ಕಾಪಾಡಲೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಜನರು ಆಯ್ಕೆ ಮಾಡಿದರು. ಆದರೆ, ಮೋದಿಯವರು ಅಧಿಕಾರಾವಧಿಯಲ್ಲಿ ಯಾವುದೇ ಬಡವರ, ಯುವಕರ ಸಮಸ್ಯೆ ಪರಿಹರಿಸಿಲ್ಲ. ಕೇವಲ ಹಿಂದೂ-ಮುಸ್ಲಿಂ ನಡುವೆ ಬಿರುಕು ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಡಿಸಿದರು.