ಹುಬ್ಬಳ್ಳಿ: ಗಂಡ-ಹೆಂಡಿರ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ ಪ್ರತಿದಿನ ಕುಡಿದು ಬಂದು ಉಣ್ಣೋಕು ಬಿಡದೇ, ಮಲಗೋಕು ಬಿಡದೆ ಕಾಟ ಕೊಡ್ತಿದ್ದ ಗಂಡನಿಗೆ ಹೆಂಡತಿ ಪಾಠ ಕಲಿಸಿರುವ ಘಟನೆ ನಗರದಲ್ಲಿ ನಡೆದಿದೆ.
ದಂಪತಿ ಬೀದಿಯಲ್ಲೇ ಹೊಡೆದಾಡಿಕೊಂಡಿರುವ ಪ್ರಕರಣ ಸುಳ್ಳ ರಸ್ತೆಯಲ್ಲಿ ನಡೆದಿದ್ದು, ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯಿಂದ ಬೇಸತ್ತ ಪತ್ನಿ, ಅದೇ ಬಿಯರ್ ಬಾಟಲಿಯಿಂದ ನಡು ರಸ್ತೆಯಲ್ಲಿಯೇ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.
ಪತಿ ತಲೆಗೆ ಬಿಯರ್ ಬಾಟಲಿಯಿಂದ ಹೆಂಡತಿ ಹೊಡೆದಿದ್ದು, ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ವ್ಯಕ್ತಿ ರಸ್ತೆಯಲ್ಲಿಯೇ ಬಿದ್ದು ನರಳಾಡುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯರು ಮಹಿಳೆಯನ್ನು ತಡೆದಿದ್ದಾರೆ.
ಓದಿ:ಬಳ್ಳಾರಿಯಲ್ಲಿ ಸ್ಕಿಡ್ ಆಗಿ ಬಿದ್ದ ಮಹಿಳಾ ಕಾನ್ಸ್ಟೇಬಲ್ ಬೈಕ್ : ಲಾರಿ ಹರಿದು ಕಾಲು ಕಟ್
ಗಂಡ -ಹೆಂಡತಿಯ ಕೌಟುಂಬಿಕ ಕಲಹದ ಹಿನ್ನೆಲೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಹಿಳೆಯ ಬಗ್ಗೆ ಹಾಗೂ ಹಲ್ಲೆಗೊಳಗಾದ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಸ್ಥಳಕ್ಕೆ ಹೊಯ್ಸಳ (112 ) ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.