ಹುಬ್ಬಳ್ಳಿ: ಹೆಂಡತಿ ಮತ್ತು ಮೂವರು ಮಕ್ಕಳನ್ನು ಹೊಂದಿದ್ದರೂ ವ್ಯಕ್ತಿಯೊಬ್ಬ ಬಾಲಕಿಯನ್ನು ಮದುವೆಯಾದ ಪ್ರಕರಣ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಹದೇವ ನಗರ ನಿವಾಸಿ ಹನುಮಂತ ಉಪ್ಪಾರ ಎಂಬಾತ ಮೊದಲನೇ ಪತ್ನಿ ಇದ್ದರೂ ಅಪ್ರಾಪ್ತೆಗೆ ತಾಳಿ ಕಟ್ಟಿದ್ದಾನೆ. ವಿಷಯ ತಿಳಿದ ಮೊದಲ ಪತ್ನಿ ನೇತ್ರಾವತಿ ಎಂಬಾಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪತಿ ಹನುಮಂತ ಉಪ್ಪಾರ ಹಣದಾಸೆ ತೋರಿಸಿ 17 ವರ್ಷದ ಬಾಲಕಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ವಿಷಯ ತಿಳಿದ ಶಿಶು ಅಭಿವೃದ್ಧಿ ಅಧಿಕಾರಿಗಳು ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ಹನುಮಂತ ಉಪ್ಪಾರ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಎರಡು ದೂರು ದಾಖಲಾಗುತ್ತಿದಂತೆ ಆರೋಪಿ ಹನುಮಂತಪ್ಪ ತಲೆಮರೆಸಿಕೊಂಡಿದ್ದಾನೆ. ಹನುಮಂತ ಉಪ್ಪಾರ ಹಾಗೂ ನೇತ್ರಾವತಿ ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಹನುಮಂತ ಉಪ್ಪಾರ ತನ್ನ ಮೇಲೆ ಅನುಮಾನ ಪಡುತ್ತಿದ್ದ ಎಂದು ಮೊದಲ ಪತ್ನಿ ದೂರಿದ್ದಾರೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಗಂಡ-ಹೆಂಡತಿ ಇಬ್ಬರು ಬೇರೆಬೇರೆಯಾಗಿ ವಾಸಿಸುತ್ತಿದ್ದರು. ಮಕ್ಕಳನ್ನು ಪತಿ ನೋಡಿಕೊಳ್ಳುತ್ತಿದ್ದ. ಈ ಬಗ್ಗೆ ಸಾಕಷ್ಟು ಬಾರಿ ಹಿರಿಯರು ಬುದ್ದಿಮಾತು ಹೇಳಿದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ. ಇದೀಗ ಹುಬ್ಬಳ್ಳಿ ಮಹಿಳಾ ಠಾಣೆ ಹಾಗೂ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
"ನನ್ನ ಪತಿ ನನಗೆ ಗಾಳಿ ಮೆಟ್ಟಿದೆ ಎಂದು ತವರು ಮನೆಗೆ ಬಿಟ್ಟು ಬಂದಿದ್ದರು. ನಂತರ ಕರೆ ಮಾಡಿದಾಗ ನನ್ನ ಶೀಲ ಶಂಕಿಸಿ, ವಿಚ್ಛೇದನ ನೀಡುವುದಾಗಿ ಹೇಳಿದ್ದರು. ನಾನು ಬೇರೆ ಮದುವೆಯಾಗುತ್ತೇನೆ. ನಿನಗೆ ಆಸ್ತಿ 2 ಲಕ್ಷ ರೂ ನೀಡುವುದಾಗಿ ಹೇಳಿದ್ದರು. ಇದನ್ನು ನಾನು ನಿರಾಕರಿಸಿದ್ದೆ. ಈ ಬಗ್ಗೆ ಹಿರಿಯರು ಬುದ್ದಿಮಾತು ಹೇಳಿದ್ದರೂ ಅಪ್ರಾಪ್ತ ಬಾಲಕಿಯನ್ನು ಎರಡನೇ ಮದುವೆಯಾಗಿದ್ದಾರೆ" ಎಂದು ನೇತ್ರಾವತಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಭಯ: ಪೋಷಕರ ವಿರುದ್ದ ದೂರು ನೀಡಿದ ಪ್ರೇಮಿಗಳು