ಧಾರವಾಡ : ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡ ಡಿಮ್ಹಾನ್ಸ್‌ನಲ್ಲಿರುವ ಕೋವಿಡ್-19 ಪ್ರಯೋಗಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಡಿಮ್ಹಾನ್ಸ್ ಪ್ರಯೋಗಾಲಯಕ್ಕೆ ಅಗತ್ಯವಿರುವ ಇನ್ನಷ್ಟು ಉಪಕರಣಗಳನ್ನು ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್-19 ತಪಾಸಣೆಯ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಡಿಮ್ಹಾನ್ಸ್ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಅನುಮೋದನೆ ನೀಡಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಪ್ರಯೋಗಾಲಯ ತಂತ್ರಜ್ಞರನ್ನೂ ಕೂಡಾ ಒದಗಿಸಲಾಗುವುದು ಎಂದರು.
ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಂಡು ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವ ಜನರನ್ನು ಸಂಪರ್ಕಿಸಿ, ಅಗತ್ಯವಿದ್ದರೆ ತಪಾಸಣೆಗೊಳಪಡಿಸುವ ಕಾರ್ಯ ನಿರ್ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಕ್ವಾರಂಟೈನ್, ಸೇವಾಸಿಂಧು, ಹೆಲ್ತ್ ವಾಚ್ ಮತ್ತಿತರ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನಿರಂತರವಾಗಿ ಪರಿಷ್ಕರಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಬಿ ಸಿ ಸತೀಶ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮೊಹ್ಮದ್ ಜುಬೇರ್, ಕಿಮ್ಸ್ ತಜ್ಞ ವೈದ್ಯ ಡಾ.ಲಕ್ಷ್ಮಿಕಾಂತ, ಡಿಮ್ಹಾನ್ಸ್ ಪ್ರೊ.ರಾಘವೇಂದ್ರ ನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ ಮತ್ತಿತರರು ಉಪಸ್ಥಿತರಿದ್ದರು.