ಧಾರವಾಡ: ಜಿಲ್ಲೆಯಲ್ಲಿ ಪ್ರವಾಹದಿಂದ ಕೆರೆ ಒಡೆದು ನೂರಾರು ಎಕರೆ ಭೂಮಿ ಮತ್ತು ಬೆಳೆ ಹಾನಿಯಾಗಿದೆ. ಆದ್ದರಿಂದ ಇರುವ ನಿಯಮಗಳಲ್ಲಿಯೇ ಹೆಚ್ಚು ಜನರಿಗೆ ಸಹಾಯವಾಗುವ ರೀತಿಯಲ್ಲಿ ಪರಿಹಾರಕ್ಕೆ ಪರಿಗಣಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿದ ಅವರು, ಒಂದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಎರಡು ಗೋಡೆ ಬಿದ್ದರೆ ಅದನ್ನು ಶೇ 50 ಪ್ರತಿಶತ ಮಾಡುತ್ತಿದ್ದಾರೆ. ಆದರೆ ಎರಡು ಗೋಡೆ ಬಿದ್ದರೂ ಅದನ್ನು ಶೇ. 100ರಷ್ಟು ಹಾನಿಯಾಗಿದೆ ಎಂದು ಪರಿಗಣಿಸಬೇಕಿದೆ. ಏಕೆಂದರೆ ಎರಡು ಗೋಡೆ ಬಿದ್ದರೆ ಇಡೀ ಮನೆಯೇ ಹೋಗಿರುತ್ತೇ. ಈ ನಿಯಮಾವಳಿ ಬಗ್ಗೆ ನಾನು ಸಿಎಂ ಜೊತೆ ಮಾತನಾಡಿದ್ದೇನೆ ಎಂದರು.
ಮುರಿದು ಹೋದ ಸೇತುವೆಗಳ ನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ಶಾಸಕರುಗಳಿಗೆ ಬೇಗ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದ್ದೇನೆ. ಈ ಬಗ್ಗೆ ಸಂಬಂಧಿಸಿದ ಸಚಿವರಿಗೆ ಮನವರಿಕೆ ಮಾಡುತ್ತೇನೆ. ಕೇಂದ್ರ ಸರ್ಕಾರ ಪ್ರವಾಹದ ಬಗ್ಗೆ ನಿತ್ಯವೂ ಮಾಹಿತಿ ಪಡೆದು ನೆರವು ನೀಡುತ್ತಿದೆ. ಈಗಾಗಲೇ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ ಎಂದರು.
ಸಂತ್ರಸ್ತರ ನೆರವಿಗೆ 15 ಎನ್.ಡಿ.ಆರ್.ಎಫ್. ತಂಡಗಳು ಕಾರ್ಯ ಮಾಡುತ್ತಿವೆ. ಧಾರವಾಡ ಜಿಲ್ಲೆಯಲ್ಲಿಯೂ ಒಂದು ತಂಡ ಕೆಲಸ ಮಾಡುತ್ತಿವೆ. ಐದು ಹೆಚ್ಚುವರಿ ಎನ್.ಡಿ.ಆರ್.ಎಫ್ ತಂಡಗಳನ್ನು ಕೇಳಿದ್ದರು. ನಾವು ಈಗಾಗಲೇ ಎನ್.ಡಿ.ಆರ್.ಎಫ್ ತಂಡಗಳನ್ನು ಕೊಟ್ಟಿದ್ದು, ಅವರು ನಿನ್ನೆ ಬೆಂಗಳೂರಿಗೆ ಬಂದು ಇಳಿದಿದ್ದಾರೆ. ನಾಲ್ಕು ಹೆಲಿಕ್ಯಾಪ್ಟರ್ ಕೊಟ್ಟಿದ್ದೇವೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ಕೊಡಬೇಕು ಅದೇ ನಿಟ್ಟಿನಲ್ಲಿ ನಾನು ಪರಿಶೀಲನೆಗೆ ಬಂದಿದ್ದೇನೆ ಎಂದರು.
ಪ್ರವಾಹದಿಂದ ಸಚಿವ ಸಂಪುಟ ರಚನೆ ತಡ
ಪ್ರವಾಹ ನಿರ್ಮಾಣವಾದ್ದರಿಂದ ಸಚಿವರ ನೇಮಕ ಆಗಲಿಲ್ಲ. ಮಳೆ ದೊಡ್ಡ ಪ್ರಮಾಣದಲ್ಲಿ ಬಂದಿದ್ದರಿಂದ ಸಚಿವರು ತಮ್ಮ ಕ್ಷೇತ್ರಗಳ ಕಡೆ ವಾಪಸ್ ಬರಬೇಕಾಯಿತು. ಇಲ್ಲದಿದ್ದರೆ ಇಷ್ಟೊತ್ತಿಗೆ ಸಚಿವ ಸಂಪುಟ ರಚನೆಯಾಗುತ್ತಿತ್ತು ಎಂದರು.