ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರ ಪಟ್ಟಿಗಳಿರೋದು ಇದೀಗ ಬೆಳಕಿಗೆ ಬಂದಿದೆ.
ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಾದ್ರೂ ದಿನಾಂಕ ಪ್ರಕಟ ಮಾಡಲು ಸಿದ್ಧವಾಗಿದೆ. ಈ ಹಿನ್ನೆಲೆ, ಧಾರವಾಡ ಜಿಲ್ಲಾಡಳಿತ ಈಗಾಗಲೇ 82 ವಾರ್ಡ್ಗಳ ಮತದಾರರ ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ, ಪಾಲಿಕೆ ಚುನಾವಣೆಗೆ ಮುಹೂರ್ತ ಸಿದ್ಧವಾಗುವ ದಿನ ಹತ್ತಿರ ಬರುತ್ತಿದ್ದಂತೆ, ಮತದಾರರ ಪಟ್ಟಿಯಲ್ಲಿನ ಲೋಪದೋಷಗಳು ಒಂದೊಂದಾಗಿ ಬಯಲಾಗುತ್ತಿವೆ.
ಪಾಲಿಕೆ ಚುನಾವಣೆಗೆ ಹೊಸದಾಗಿ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ಜನರು ವಾಸವಿಲ್ಲದಿದ್ದರೂ, ದಶಕದ ಹಿಂದೆಯೇ ಮನೆ ತೊರೆದು ಹೋಗಿದ್ರೂ ಆ ಪ್ರದೇಶದಲ್ಲಿ ಸಾವಿರಾರು ಜನರ ಮತದಾನದ ಹಕ್ಕು ಇರೋದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಜನರೇ ವಾಸವಿಲ್ಲದಿದ್ದರೇ ಮತದಾನದ ಹಕ್ಕನ್ನು ಚಲಾವಣೆ ಮಾಡ್ತಿರೋದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಕಾರ್ಯಾಗಾರದ ಹಿಂಭಾಗದಲ್ಲಿನ ಡೌನ್‌ಚಾಳ, ಸಿಮೆಂಟ್‌ಚಾಳ ಹಾಗೂ ವಿದ್ಯಾರಣ್ಯನಗರದ ನಿವಾಸಿಗಳನ್ನು 2012ರಲ್ಲೇ ಅಲ್ಲಿಂದ ತೆರವುಗೊಳಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆಯ ಜಾಗವನ್ನು ಅತಿಕ್ರಮಣ ಮಾಡಿ ಮನೆ ನಿರ್ಮಿಸಲಾಗಿದೆ ಎಂದು 500ಕ್ಕೂ ಅಧಿಕ ಮನೆಗಳನ್ನ ತೆರವುಗೊಳಿಸಿ ದಶಕವೇ ಕಳೆದಿದೆ. ಆದ್ರೆ, ಮನೆ ತೊರೆದು ಬೇರೆಡೆ ವಾಸವಿರುವ ಸಾವಿರಾರು ಮತದಾರರ ಹೆಸರನ್ನು ಇನ್ನೂ ಹುಬ್ಬಳ್ಳಿಯ 61ನೇ ವಾರ್ಡನಲ್ಲೇ ಇರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅರಣ್ಯದಲ್ಲಿ ಮರ ಕಡಿದು ಸಾಗಾಟ : ಪ್ರಶ್ನಿಸಿದ ಫಾರೆಸ್ಟ್ ಗಾರ್ಡ್‌ಗೆ ಗ್ರಾಪಂ ಸದಸ್ಯನಿಂದ ಆವಾಜ್
ಅಲ್ಲದೇ ಮನೆ ಇಲ್ಲದಿದ್ದರೂ, ಮತದಾರರು ಆ ವಾರ್ಡನಲ್ಲಿ ವಾಸವಿಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ಸಾವಿರಾರು ಜನರ ಹೆಸರು ಇರೋದು ನಕಲಿ ಮತದಾನ ಮಾಡೋಕೆ ಮಾಡಿದ ಪ್ಲ್ಯಾನ್ ಅನ್ನೋ ಅನುಮಾನ ಮೂಡಿದೆ. ಹೀಗಾಗಿ, 61ನೇ ವಾರ್ಡ್ನಲ್ಲಿ ಈ ತರಹದ ಯಡವಟ್ಟು ಆಗಿರುವ ಬಗ್ಗೆ ಪಾಲಿಕೆ ಆಯುಕ್ತರನ್ನು ಪ್ರಶ್ನೆ ಮಾಡಿದ್ರೆ ಅವರು ಹೇಳೋದೇ ಬೇರೆ..
2018ರ ವಿಧಾನಸಭೆ ಚುನಾವಣೆಯ ವೇಳೆಯಿಂದ ಮತದಾರರ ಪಟ್ಟಿಯಿಂದ ಸ್ಥಳಾಂತರಗೊಂಡವರ ಹೆಸರನ್ನು ಕೈ ಬಿಡುವಂತೆ ಮನವಿ ಮಾಡಿದ್ರೂ ಮತ್ತೆ ಮತ್ತೆ ಆ ಮತದಾರರ ಹೆಸರುಗಳನ್ನು ಆ ವಾರ್ಡ್ನಲ್ಲಿ ಮುಂದು ವರೆಸಿರುವುದು ಜಿಲ್ಲಾಡಳಿತದ ಯಡವಟ್ಟಿಗೆ ಸಾಕ್ಷಿಯಾಗಿದೆ. ಇನ್ನು ಮುಂದಾದ್ರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇದನ್ನ ಸರಿಪಡಿಸಬೇಕಿದೆ.