ಧಾರವಾಡ: ಜಿಲ್ಲೆಯಿಂದ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಪರವಾಗಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಶಿವಲೀಲಾ ಪ್ರಚಾರ ಮಾಡಿದರು. ಗ್ರಾಮದಲ್ಲಿ ಶಿವಲೀಲಾ ಕುಲಕರ್ಣಿ ಪಾದಯಾತ್ರೆ ಸಹ ಮಾಡಿದರು. ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನುವಾಣಾ ಕಣಕ್ಕಿಳಿದಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪರವಾಗಿ ಅವರ ಪತ್ನಿ ಶಿವಲೀಲಾ ಅವರೇ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಉಪ್ಪಿನ ಬೆಟಗೇರಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದ ಶಿವಲೀಲಾ ಕುಲಕರ್ಣಿ, ವಿನಯ್ ಕುಲಕರ್ಣಿ ಹಾಗೂ ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಗಳ ಕರಪತ್ರವನ್ನು ಮತದಾರರಿಗೆ ನೀಡಿ ಈ ಬಾರಿ ವಿನಯ್ ಕುಲಕರ್ಣಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇನ್ನು ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಸಹ ಗ್ರಾಮೀಣ ಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ರೋಡ್ ಶೋ ಮೂಲಕ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದ ಬೃಹತ್ ರೋಡ್ ಶೋದಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ಅಮೃತ ದೇಸಾಯಿ ಸಾಥ್ ನೀಡಿದರು.
ಧಾರವಾಡದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಆರೋಪಿ ಅಗಿರುವ ಕಾರಣ ಅವರು ಧಾರವಾಡ ಪ್ರವೇಶಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನಿರಾಕರಿಸಿತ್ತು. ಅಗತ್ಯ ಬಿದ್ದಾಗ ಮಾತ್ರ ಸಿಬಿಐ ಅಧಿಕಾರಿಗಳ ಜೊತೆ ಧಾರವಾಡ ಪ್ರವೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಈ ಬಾರಿಯ ವಿಧಾನಸಭಾ ಆಚುನಾವಣೆಗೆ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ನಿಂತಿದ್ದಾರೆ.
ಹಾಗಾಗಿ 50 ದಿನಗಳ ಕಾಲ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಸ್ಥಳೀಯ ನ್ಯಾಯಾಲಯದಲ್ಲಿ ಇದನ್ನು ಬಗೆಹರಿಸಿಕೊಳ್ಳುವಂತೆ ಹೇಳಿತ್ತು. ಆದರೆ, ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಬಿ ಜಯಂತ್ ಕುಮಾರ್ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ವಿನಯ್ ಕುಲಕರ್ಣಿ ಹೈಕೋರ್ಟ್ ಮೊರೆ ಹೋಗಿದ್ದರು. 50 ರಿಂದ 30 ದಿಗಳಿಗೆ ಇಳಿದಿದ್ದ ವಿನಯ್ ಕುಲಕರ್ಣಿ 30 ದಿನಗಳ ಕಾಲ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣ ನಡೆಸಿದ ನ್ಯಾಯಮೂರ್ತಿ ಕೆ ನಟರಾಜ್ ನೇತೃತ್ವದ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ.
ವಿನಯ್ ಕುಲಕರ್ಣಿ ಅವರು ಧಾರವಾಡ ಗ್ರಾಮಂತರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದಾರೆ. ಅವರಿಗೆ ಧಾರವಾಡ ಪ್ರವೇಶ ಅವಕಾಶ ನೀಡಬೇಕು ಎಂದು ಕುಲಕರ್ಣಿ ಪರ ವಕೀಲರು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಅರ್ಜಿದಾರರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಿರುವುದು ಟಿಕೆಟ್ ನೀಡಿದವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿತ್ತು. ವಿನಯ್ ಕುಲಕರ್ಣಿ ಪರ ಅವರ ಪತ್ನಿ ಶಿವಲೀಲಾ ಅವರೇ ಪತಿ ಪರವಾಗಿ ನಾಮಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ನಲ್ಲೂ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅರ್ಜಿ ವಜಾ: ಧಾರವಾಡ ಪ್ರವೇಶಕ್ಕಿಲ್ಲ ಅನುಮತಿ