ಧಾರವಾಡ: ವಿಳಂಬವಾಗಿ ನನಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ತಡವಾಗಿದ್ದರಿಂದ ನಮಗೆಲ್ಲ ಸಹಜವಾಗಿಯೇ ಆತಂಕವಿತ್ತು. ಇದೀಗ ಅಧಿಕೃತವಾಗಿ ಪಕ್ಷದ ಅಭ್ಯರ್ಥಿಯಾಗಿದ್ದೇನೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಮಯ ಕಡಿಮೆ ಇದೆ. ಇಂತಹ ಸಮಯದಲ್ಲಿ ಚುನಾವಣೆ ಮಾಡುವುದು ಸ್ವಲ್ಪ ಕಷ್ಟ. ಎಲ್ಲಾ ಮುಖಂಡರ ಮತ್ತು ಕಾರ್ಯಕರ್ತರ ಜೊತೆ ಮಾತನಾಡಿದ್ದೇನೆ. ನಮ್ಮ ಕಾರ್ಯಕರ್ತರ ಪಡೆ ದೊಡ್ಡದಾಗಿದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಜೆಡಿಎಸ್ ಕೂಡ ಜೊತೆಗಿದೆ. ಹೊರಟ್ಟಿಯವರಂತಹ ನಾಯಕರು ನಮ್ಮ ಜೊತೆ ಇದ್ದಾರೆ. ಶಿವಳ್ಳಿ ನಿಧನದ ನಂತರ ಗಲಿಬಿಲಿಗೊಂಡಿದ್ದೆವು. ಆದರೆ ಅವರ ಕಾರ್ಯಕರ್ತರು ನಮಗೆ ಅಭಯ ನೀಡಿದ್ದಾರೆ ಎಂದರು. ಶಿವಳ್ಳಿಯವರ ರೀತಿಯಲ್ಲೇ ಕೆಲಸ ಮಾಡೋದಾಗಿ ಹೇಳಿದ್ದಾರೆ.
ಇನ್ನು ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಅಲ್ಪಸಂಖ್ಯಾತರು ಅನ್ನೋದಿಲ್ಲ. ಅದೆಲ್ಲ ಇರೋದು ಬಿಜೆಪಿಯಲ್ಲಿ ಮಾತ್ರ. ನಮಲ್ಲಿ ಅಂಥ ಭೇದ-ಭಾವ ಇಲ್ಲ. ನಮ್ಮಲ್ಲಿ ಎಲ್ಲರೂ ಒಂದೇ ಎಂದರು.
ನಾಳೆ ನಾಮಪತ್ರ ಸಲ್ಲಿಕೆ :
ಧಾರವಾಡ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ವಿನಯ್ ಕುಲಕರ್ಣಿ, ಗುರುವಾರ ಬಿ ಪಾರ್ಮ್ನೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಹಳೇ ಎಪಿಎಂಸಿ ಶಂಬುಲಿಂಗೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.