ಧಾರವಾಡ : ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಂಡ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಸಾಕ್ಷಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹಾಗೂ ಮೃತ ಯೋಗೀಶಗೌಡ ಸಹೋದರ ಗುರುನಾಥಗೌಡ ಆರೋಪಿಸಿದ್ದಾರೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ಅದ್ಧೂರಿಯಾಗಿ ಜನ್ಮ ದಿನೋತ್ಸವ ಆಚರಿಸಿಕೊಂಡಿದ್ದರು. ವಿನಯ್ ಕುಲಕರ್ಣಿ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ 9 ತಿಂಗಳು ಜೈಲುವಾಸ ಅನುಭವಿಸಿ ಬಂದಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ಅವರು, ಸಾಕ್ಷಿಗಳ ಮೇಲೆ ಒತ್ತಡ ಹೇರಬಾರದು ಹಾಗೂ ಸಾಕ್ಷಿ ನಾಶ ಮಾಡಬಾರದು ಎಂದು ನ್ಯಾಯಾಲಯ ಅವರಿಗೆ ಆದೇಶ ಮಾಡಿದ್ದು, ತಮ್ಮ ಜನ್ಮ ದಿನೋತ್ಸವದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸ ನಡೆದಿದೆ ಆರೋಪಿಸಿದ್ದಾರೆ.
ವಿನಯ ಕುಲಕರ್ಣಿ ಹುಟ್ಟುಹಬ್ಬಕ್ಕೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು, ನಿಮ್ಮ ಜೊತೆ ನಾವಿದ್ದೇವೆ ನೀವು ಮುನ್ನುಗ್ಗಿ ಎಂಬ ಮಾತನ್ನು ಹೇಳುತ್ತಾರೆ. ಇದು ಸಾಕ್ಷಿಗಳ ಮೇಲೆ ಪರೋಕ್ಷವಾಗಿ ಒತ್ತಡ ಹೇರಿದಂತಾಗುತ್ತದೆ. ಕೊಲೆ ಪ್ರಕರಣದಲ್ಲಿ ಜನ ಸಾಮಾನ್ಯರು ಸಾಕ್ಷಿಗಳಾಗಿದ್ದಾರೆ. ವಿನಯ್ ಒಬ್ಬ ಪ್ರಭಾವಿ ರಾಜಕಾರಣಿ. ಅವರು ರಾಜಕೀಯವಾಗಿ ಬೆಳೆಯುತ್ತಿದ್ದಾರೆ ಬೆಳೆಯಲಿ. ಆದರೆ, ರಾಜಕೀಯ ವೇದಿಕೆಗಳಲ್ಲಿ ಸಾಕ್ಷಿಗಳ ಮೇಲೆ ಪರೋಕ್ಷವಾಗಿ ಒತ್ತಡ ಹಾಕುವ ಕೆಲಸ ಮಾಡಬಾರದು. ವಿನಯ್ ಅವರು ಕೋರ್ಟ್‌ನಿಂದ ಅಪರಾಧಿ ಅಲ್ಲ ಎಂದು ಸಾಬೀತುಪಡಿಸಿಕೊಂಡು ಬರಲಿ. ಸಾಕ್ಷಿಗಳ ಮೇಲೆ ಇದೇ ರೀತಿ ಒತ್ತಡ ಹೇರುವ ಕೆಲಸ ನಡೆದರೆ ನಾವು ಅನಿವಾರ್ಯವಾಗಿ ಮತ್ತೆ ಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದರು.
ಎರಡು ವರ್ಷಗಳಿಂದ ನಾನು ನನ್ನ ಜಾನುವಾರುಗಳನ್ನು ನೋಡಿಲ್ಲ ಎಂದು ವಿನಯ್ ಕುಲಕರ್ಣಿ ವೇದಿಕೆ ಮೇಲೆ ಹೇಳುತ್ತಾರೆ. ಆದರೆ, ನಾವು 40 ವರ್ಷದ ತಮ್ಮನನ್ನು ಕಳೆದುಕೊಂಡಿದ್ದೇವೆ. ನಮ್ಮ ನೋವು ಕೇಳುವವರಾರು? ಎಂದು ಯೋಗೀಶಗೌಡ ಸಹೋದರ ಗುರುನಾಥಗೌಡ ಪ್ರಶ್ನಿಸಿದ್ದಾರೆ. ಯೋಗೀಶಗೌಡರ ಸಾವಿಗೆ ನ್ಯಾಯ ಸಿಗಬೇಕು ಎಂದು ನಾವು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ. ಎಂದೂ ತಿಳಿಸಿರುವ ಕೊರವರ, ಯೋಗೀಶಗೌಡ ಹತ್ಯೆಯಲ್ಲಿ ಪೊಲೀಸ್ ಆಯುಕ್ತರೊಬ್ಬರ ಹೆಸರು ಬರಬೇಕಿತ್ತು. ಅವರು ಬಚಾವ್ ಆಗಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಕೇಸ್: ವಿನಯ ಕುಲಕರ್ಣಿಗೆ ಸುಪ್ರೀಂನಲ್ಲಿ ಭಾರೀ ಹಿನ್ನಡೆ