ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿರುವ 2023-24 ನೇ ಸಾಲಿನ ರಾಜ್ಯ ಬಜೆಟ್ ಸಮತೋಲಿತ ಹಾಗೂ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಹೇಳಿದರು. ಬಜೆಟ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್. ಕೃಷಿ, ಉದ್ಯಮ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು.
ಶಿಕ್ಷಣಕ್ಕೆ ಶೇ.20 ರಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ರೈತರಿಗೆ 3 ರಿಂದ 5 ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡಲು ಘೋಷಣೆ ಮಾಡಲಾಗಿದೆ. ಆರೋಗ್ಯಕ್ಕಾಗಿ 428 ನಮ್ಮ ಕ್ಲಿನಿಕ್ ಸ್ಥಾಪನೆ, ಶಿಕ್ಷಣ ಕ್ಷೇತ್ರದಲ್ಲಿ 7 ಹೊಸ ವಿವಿ, ಒಂದು ವೈದ್ಯಕೀಯ ಕಾಲೇಜು ಸ್ಥಾಪನೆಯ ಬಗ್ಗೆ ಪ್ರಕಟಿಸಿದ್ದಾರೆ. ಮಹದಾಯಿಗೆ ಮತ್ತು ಕಳಸಾ ಬಂಡೂರಿಗೂ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಮಹದಾಯಿಗೆ 1 ಸಾವಿರ ಕೋಟಿ ರೂ, ಕಳಸಾ-ಬಂಡೂರಿಗೆ 80 ಕೋಟಿ ರೂ ಅನುದಾನ ಘೋಷಣೆ ಮಾಡಲಾಗಿದೆ. ಈ ಭಾಗದ ರೈತರಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗಿದೆ. ಒಳಚರಂಡಿ ವ್ಯವಸ್ಥೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕ್ರೀಡೆಗೂ ವಿಶೇಷ ಮಹತ್ವ ನೀಡಲಾಗಿದ್ದು ಸುಮಾರು 50 ಕೋಟಿ ರೂ. ವರೆಗೆ ಮೀಸಲಿಟ್ಟಿದ್ದಾರೆ. ಶಾಲಾ ವಿದ್ಯಾರ್ಥಿಗಳು, ಯುವಕರಿಗೆ ಪ್ರೋತ್ಸಾಹ ನೀಡಲಾಗಿದೆ ಎಂದರು.
ಇದನ್ನೂ ಓದಿ: ಎಸ್ಸಿ-ಎಸ್ಟಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವಿದ್ಯುತ್ ಫ್ರೀ
ಪ್ರಸಕ್ತ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕಕ್ಕೆ ಉತ್ತಮ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸ್ಥಾಯಿ ಸಮಿತಿ ಸದಸ್ಯ ಶೇಷಗಿರಿ ಕುಲಕರ್ಣಿ ಹೇಳಿದರು. ನೀರಾವರಿ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಇದೊಂದು ಚುನಾವಣೆ ಬಜೆಟ್‌ನಂತೆ ಕಾಣುವುದಿಲ್ಲ. ಸರ್ವ ರಂಗಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Karnataka Budget 2023: ರಾಜ್ಯ ಬಜೆಟ್ ಹೈಲೈಟ್ಸ್ - ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ?